ಹಾಸನ, ಮಾ 10 (DaijiworldNews/HR): ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳನ್ನು ವಿವಾಹವಾಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಕಂಕಣಭಾಗ್ಯ ಕೂಡಿ ಬರಲಿ ಎಂದು ಅವಿವಾಹಿತ ರೈತ ಸಮುದಾಯದ ಯುವಕರು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದನ್ನು ಗಮನಿಸಿದ್ದು, ರೈತರು ಸ್ವಾವಲಂಬಿಯಾಗುವ ಅಂಶ ಯೋಜನೆ ಪಂಚರತ್ನದಲ್ಲಿ ಸೇರಿದೆ. ಜೊತೆಗೆ ರೈತರ ಮಕ್ಕಳನ್ನು ವಿವಾಹವಾಗುವ ಯುವತಿಯವರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು ಎಂದರು.
ಇನ್ನು ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಯ ವಿಚಾರಕ್ಕೆ ನಾನು ಮಹತ್ವ ಕೊಡಲ್ಲ. ನರೇಂದ್ರಮೋದಿ ಅವರು ಬರುವ ಸಂದರ್ಭದಲ್ಲಿ ಅವರು ಬಿಜೆಪಿ ಸೇರಬಹುದು. ನನಗೆ ಬಹಳ ದಿವಸದ ಹಿಂದೆಯೇ ಈ ಬೆಳವಣಿಗೆ ಗೊತ್ತಿತ್ತು ಎಂದು ಹೇಳಿದ್ದಾರೆ.