ನವದೆಹಲಿ, ಮಾ 10 (DaijiworldNews/DB): ಭಾರತದ ಮಹಿಳೆಯರ ಗೌರವ ಹೆಚ್ಚಬೇಕು. ಹಾಗಿದ್ದಲ್ಲಿ ಭಾರತ ಇನ್ನಷ್ಟು ಔನತ್ಯಕ್ಕೇರಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಮಹಿಳೆಯರ ಆರ್ಥಿಕ ಸಬಲೀಕರಣ' ಕುರಿತು ಬಜೆಟ್ ನಂತರದ ವೆಬ್ನಾರ್ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರ ಗೌರವ ಹೆಚ್ಚಬೇಕು. ಆ ಪ್ರಜ್ಞೆ ದೇಶದ ಪ್ರತಿಯೊಬ್ಬರಲ್ಲಿಯೂ ಬರಬೇಕು. ಭಾರತ ಮುನ್ನಡೆಯಬೇಕಾದರೆ ಮಹಿಳಾ ಶಕ್ತಿಯ ವಿಕಾಸವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಹೆಣ್ಣು ಮಕ್ಕಳು ನಡೆಯುವ ಸಾಧನೆಯ ದಾರಿಗೆ ಯಾವುದೇ ಅಡೆತಡೆ ಬಾರದಂತೆ ಸಂಕಲ್ಪ ಮಾಡಬೇಕು ಎಂದರು.
ಕಳೆದೊಂದು ದಶಕದಲ್ಲಿ ಕಾಲೇಜು ಓದುವ ಹೆಣ್ಣು ಮಕ್ಕಳ ಸಂಖ್ಯೆ ಮೂರು ಪಟ್ಟು ಜಾಸ್ತಿಯಾಗಿದೆ. ವಿಜ್ಞಾನ ಕ್ಷೇತ್ರದ ಕಲಿಕೆಯಲ್ಲೂ ಹೆಣ್ಣು ಮಕ್ಕಳು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಶೇಕಡಾ 43ರಷ್ಟು ಮಹಿಳಾ ದಾಖಲಾತಿಯಿರುವುದು ದೇಶದಲ್ಲಿ ಹೆಣ್ಣು ಮಕ್ಕಳು ಶೈಕ್ಷಣಿಕವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಶ್ಲಾಘಿಸಿದರು.
ಅಮೆರಿಕಾ, ಇಂಗ್ಲೆಂಡ್, ಜರ್ಮನಿಯಂತಹ ದೇಶಗಳಿಗಿಂತ ಭಾರತದಲ್ಲೇ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕ್ರೀಡೆ, ವ್ಯಾಪಾರ, ರಾಜಕೀಯ, ವೈದ್ಯಕೀಯ ಕ್ಷೇತ್ರಗಳನ್ನು ಮುಂಚೂಣಿಯಲ್ಲಿದ್ದುಕೊಂಡು ನಿಭಾಯಿಸುತ್ತಿರುವ ಸಾಕಷ್ಟು ಮಹಿಳೆಯರು ನಮ್ಮ ದೇಶದವರಾಗಿದ್ದಾರೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.