ಕೋಝಿಕ್ಕೋಡ್, ಮಾ 10 (DaijiworldNews/DB): ಕಳೆದ ಕೆಲವು ದಿನಗಳ ಹಿಂದೆ ಮುದ್ದಾದ ಮಗುವಿಗೆ ಜನ್ಮ ನೀಡಿದ್ದ ಕೇರಳದ ತೃತೀಯ ಲಿಂಗಿ ದಂಪತಿ ಇದೀಗ ಆ ಮಗುವಿನ ನಾಮಕರಣ ಶಾಸ್ತ್ರ ನೆರವೇರಿಸಿದ್ದಾರೆ.
ಕೇರಳದ ಕೋಝಿಕ್ಕೋಡ್ನ ಉಮ್ಮಲತ್ತೂರ್ನ ತೃತೀಯಲಿಂಗಿ ದಂಪತಿ ಜಿಯಾ ಮತ್ತು ಜಹ್ಯಾದ್ ತಮ್ಮ ಮಗುವಿಗೆ ಜಬಿಯಾ ಸಹದ್ ಎಂಬುದಾಗಿ ನಾಮಕರಣ ಮಾಡಿದ್ದಾರೆ. ಮೂಲಗಳ ಪ್ರಕಾರ ಅವರಿಗೆ ಹೆಣ್ಣು ಮಗು ಜನಿಸಿತ್ತು ಎನ್ನಲಾಗಿದೆ.
ಕಳೆದ ಫೆಬ್ರವರಿ 2ರಂದು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜಹ್ಯಾದ್ ಅವರಿಗೆ ಶಸ್ತ್ರಚಿಕಿತ್ಸೆ ಮುಖಾಂತರ ಹೆರಿಗೆಯಾಗಿತ್ತು. ಆದರೆ ಅಂದು ಅವರು ಮಗುವಿನ ಲಿಂಗ ಗುರುತು ಬಹಿರಂಗಪಡಿಸಿರಲಿಲ್ಲ. ಸದ್ಯ ಮಗುವಿಗೆ ಹಾಲಿನ ಬ್ಯಾಂಕ್ ಮೂಲಕ ಹಾಲುಣಿಸಲಾಗುತ್ತಿದೆ ಎನ್ನಲಾಗಿದೆ. ಜಿಯಾ ಡ್ಯಾನ್ಸರ್ ಆಗಿದ್ದು, ಜಹಾದ್ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.