ಮುಂಬೈ, ಮಾ 10 (DaijiworldNews/DB): ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೊಬ್ಬಳಿಗೆ ತಾಯಿಯೇ ತಮ್ಮ ಕಿಡ್ನಿ ದಾನ ಮಾಡಿ ಮಗಳ ಜೀವಕ್ಕೆ ನೆರವಾದ ವಿದ್ಯಾಮಾನ ಮುಂಬೈಯಲ್ಲಿ ನಡೆದಿದೆ.
ನವಿ ಮುಂಬೈನ ವಾಶಿ ನಿವಾಸಿ ನೇಹಾ ಸಿಂಗ್ ( 30) ಅವರಿಗೆ ಅವರ ತಾಯಿ ಕಿಡ್ನಿ ದಾನ ಮಾಡಿದ್ದಾರೆ. 2021ರ ಆಗಸ್ಟ್ ತಿಂಗಳಿನಲ್ಲಿ ನೇಹಾ ಅವರಿಗೆ ಎಂಡ್-ಸ್ಟೇಜ್ ಕ್ರೋನಿಕ್ ಕಿಡ್ನಿ ಕಾಯಿಲೆ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರು ನಿಯಮಿತ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಆದರೆ ಆಗಾಗ ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದಾಗ ಅವರಿಗೆ ಕ್ಷಯರೋಗ ಇರುವುದು ಗೊತ್ತಾಗಿತ್ತು.
ಇನ್ನು ಮಗಳ ಜೀವ ಉಳಿಸುವ ಸಲುವಾಗಿ ತಾಯಿ ಕಿಡ್ನಿ ದಾನಕ್ಕೆ ಮುಂದಾದರು. ಆದರೆ ಕ್ಷಯರೋಗ, ವೈವಿಧ್ಯ ರಕ್ತದ ಗುಂಪಿನ ಕಾರಣದಿಂದಾಗಿ ಕಿಡ್ನಿಯನ್ನು ಮಗಳಿಗೆ ನೀಡುವುದು ತೀರಾ ಜಟಿಲವಾಗಿತ್ತು.
ವೈದ್ಯರು ಒಂದು ವರ್ಷ ಕಾಲ ಆಕೆಗೆ ಕ್ಷಯ ರೋಗಕ್ಕೆ ಚಿಕಿತ್ಸೆ ನೀಡಿ ಬಳಿಕ ಕಿಡ್ನಿ ಕಸಿ ಮಾಡಲು ನಿರ್ಧರಿಸಿದ್ದರು. ಆದರೆ ಕ್ಷಯ ರೋಗಿಯಾದ ಆಕೆಗೆ ವಿಭಿನ್ನ ರಕ್ತದ ಗುಂಪು ಹೊಂದಿದ ವ್ಯಕ್ತಿಗಳ ಕಿಡ್ನಿ ಕಸಿ ಮಾಡುವುದು ಸುಲಭವಾಗಿರಲಿಲ್ಲ. ಕಿಡ್ನಿ ತಜ್ಞ, ನವಿ ಮುಂಬೈನ ಮೆಡಿಕೋವರ್ ಆಸ್ಪತ್ರೆಯ ಡಾ. ಅಮಿತ್ ಲಂಗೋಟೆ ಅವರು ಡಾ. ಅಮೋಲ್ ಪಾಟೀಲ್ ಅವರೊಂದಿಗೆ ಸೇರಿ ಎಬಿಒ-ಇನ್ಕಂಪ್ಯಾಟಿಬಲ್ ಕಿಡ್ನಿ ಕಸಿಯನ್ನು ನೇಹಾರಿಗೆ ಯಶಸ್ವಿಯಾಗಿ ಮಾಡಿದ್ದಾರೆ. ಸದ್ಯ ನೇಹಾ ಹಾಗೂ ಅವರ ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.