ಮುಂಬೈ, ಮಾ 10 (DaijiworldNews/HR): ಮುಂಬೈನ ಬಾಂದ್ರಾ ಮೇಲ್ಸೇತುವೆ ಬಳಿ ಪೊಲೀಸರನ್ನು ಕಂಡು ಯು ಟರ್ನ್ ಹೊಡೆದು ವೇಗದಿಂದ ಬೈಕ್ ಚಲಾಯಿಸಿದ ಪರಿಣಾಮ ಫ್ಲೈಓವರ್ ನ ಗೋಡೆಗೆ ಡಿಕ್ಕಿ ಹೊಡೆದು, ಇಬ್ಬರು ಯುವಕರು 40 ಅಡಿ ಆಳದಲ್ಲಿರುವ ರಸ್ತೆ ಬಿದ್ದು ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಾಂದ್ರಾ ಫ್ಲೈಓವರ್ ನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಸೇತುವೆಯಲ್ಲಿ ಪೊಲೀಸರನ್ನು ಕಂಡು, ಕೂಡಲೇ ಬೈಕ್ ಅನ್ನು ತಿರುಗಿಸಿ ವೇಗವಾಗಿ ಹೊರಟಿದ್ದರು. ಆಗ ಬೈಕ್ ಫ್ಲೈಓವರ್ ನ ರೈಲಿಂಗ್ ಗೆ ಡಿಕ್ಕಿಹೊಡೆದ ಪರಿಣಾಮ ಇಬ್ಬರು ಕೆಳಗಿದ್ದ ರಸ್ತೆಗೆ ಎಸೆಯಲ್ಪಟ್ಟಿದ್ದರು.
ಬೈಕ್ ನಲ್ಲಿದ್ದ ಹಿಂಬದಿ ಸವಾರ ಅಬ್ದುಲ್ ಅಹದ್ ಶೇಕ್ (18ವರ್ಷ) ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಚಲಾಯಿಸುತ್ತಿದ್ದಾತ ಅಪ್ರಾಪ್ತನಾಗಿದ್ದು, ಆತನ ತಲೆಗೆ ಗಂಭೀರ ಗಾಯವಾಗಿದೆ. ಆತ ಬಾಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ತಿಳಿಸಿದೆ.