ಶಿವಮೊಗ್ಗ, ಮಾ 11 (DaijiworldNews/HR): ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದಿದ್ದ 15ಕ್ಕೂ ಹೆಚ್ಚು ಅಗ್ನಿ ಅವಘಡ ಪ್ರಕರಣಗಳಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ರೂವಾರಿ ತೀರ್ಥಹಳ್ಳಿಯ ಸೊಪ್ಪಿನಗುಡ್ಡದ ನಿವಾಸಿಯಾಗಿರುವ ಮೊಹಮ್ಮದ್ ಶಾರಿಕ್ನ ಕೈವಾಡವಿರುವುದು ತನಿಖೆಯ ವೇಳೆ ಬಯಲಿಗೆ ಬಂದಿದ್ದು, ಈತ ಮತ್ತು ಅವನ ಗ್ಯಾಂಗ್ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಇಟ್ಟು ತಾನು ತಯಾರಿಸಿದ ಬಾಂಬ್ಗಳನ್ನು ಟೆಸ್ಟ್ ಮಾಡುತ್ತಿದ್ದ ಎನ್ನುವುದು ಬಯಲಾಗಿದೆ.
ಶಾರಿಕ್ ಮತ್ತು ಆತನ ತಂಡ ತನ್ನ ಟ್ರಯಲ್ ಬ್ಲಾಸ್ಟ್ಗೆ ಮಾರ್ಗದ ಬದಿಯ ವಾಹನಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡುತ್ತಿದ್ದು, ಶಿವಮೊಗ್ಗದ ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಮೊದಲೇ ತೀರ್ಥಹಳ್ಳಿಯಲ್ಲೂ ತಾಲೀಮು ನಡೆಸಿರುವುದಾಗಿ ತನಿಖೆಯ ವೇಳೆ ತಿಳಿದು ಬಂದಿದೆ.
ಇನ್ನು ಶಾರಿಕ್ನ ಸಾರಥ್ಯದಲ್ಲೇ ಮಂಗಳೂರಿನ ಗೋಡೆಬರಹ, ಶಿವಮೊಗ್ಗ ಮತ್ತು ಮಂಗಳೂರಿನ ಟ್ರಯಲ್ ಬ್ಲಾಸ್ಟ್ಗಳು ನಡೆದಿದ್ದು, ಸ್ವತಃ ಶಾರಿಕ್ ಮಂಗಳೂರು ಕುಕ್ಕರ್ ಬ್ಲಾಸ್ಟ್ನಲ್ಲಿ ಸಿಕ್ಕಿಬಿದ್ದಿದ್ದಾನೆ. ಕುಕ್ಕರ್ ಬ್ಲಾಸ್ಟ್ನಲ್ಲಿ ಗಾಯಗೊಂಡು ಸಂಪೂರ್ಣ ಚೇತರಿಸಿಕೊಂಡಿರುವ ಆತನನ್ನು ಈಗ ಹತ್ತು ದಿನಗಳ ಅವಧಿಗೆ ಎನ್ಐಎ ವಶಕ್ಕೆ ಒಪ್ಪಿಸಲಾಗಿದೆ.
ಎನ್ಐಎ ಪೊಲೀಸರು ಶಾರಿಕ್ ಮತ್ತು ಜಬಿಯುಲ್ಲಾನ ವಿಚಾರಣೆಯ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ನಡೆದ ಹಲವು ಅಗ್ನಿ ಅವಘಡಗಳೆಂದು ನಂಬಲಾಗಿದ್ದ ಘಟನೆಗಳ ಹಿಂದೆ ಶಾರಿಕ್ ಕೈವಾಡ ಬಯಸಲಾಗಿದೆ.