ನವದೆಹಲಿ, ಮಾ 11 (DaijiworldNews/DB): ಜೈಲುವಾಸವು ನನ್ನ ಉತ್ಸಾಹವನ್ನು ಕುಗ್ಗಿಸದು ಎಂದು ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಮನೀಶ್ ಸಿಸೋಡಿಯಾ ಸದ್ಯ ತಿಹಾರ್ ಜೈಲಿನಲ್ಲಿದ್ದು ಜೈಲಿನಿಂದ ಮನೀಶ್ ಸಿಸೋಡಿಯಾ ಸಂದೇಶ ಎಂದು ಬರೆಯಲಾಗಿರುವ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಮಾಡಲಾದ ಟ್ವೀಟ್ನಲ್ಲಿ, ಸಾಹೇಬರೇ, ಜೈಲುವಾಸದಿಂದ ಕೆಲವು ತೊಂದರೆಗಳಾಗಬಹುದು. ಆದರೆ ಇದರಿಂದ ನಾನು ಕುಗ್ಗಲಾರೆ. ನನ್ನ ಉತ್ಸಾಹ ಕುಗ್ಗಿಸಲು ಖಂಡಿತಾ ಇದರಿಂದ ಸಾಧ್ಯವಿಲ್ಲ ಎಂದಿದ್ದಾರೆ.
ಬ್ರಿಟಿಷರು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿಗಟ್ಟಿ ಅವರಿಗೆ ತೊಂದರೆ ನೀಡಿದ್ದರು. ಆದರೆ ಸ್ವಾತಂತ್ರ್ಯ ಹೋರಾಟಗಾರರ ಉತ್ಸಾಹ ಎಂದಿಗೂ ಕಡಿಮೆಯಾಗಿರಲಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಮದ್ಯ ನೀತಿಯ ರಚನೆ ಹಾಗೂ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣ ಸಂಬಂಧಿಸಿ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ದಳವು ಫೆಬ್ರವರಿ 26ರಂದು ಬಂಧಿಸಿತ್ತು. ಇನ್ನು ಈ ವಾರದ ಆರಂಭದಲ್ಲಿ ಜಾರಿ ನಿರ್ದೇಶನಾಲಯದಿಂದ ಅವರು ಬಂಧಿಸಲ್ಪಟ್ಟಿದ್ದರು.