ಮಡಿಕೇರಿ, ಮಾ 11 (DaijiworldNews/DB): ಎಚ್.ಡಿ. ದೇವೇಗೌಡರು ಯಾರಿಗೋ ಹುಟ್ಟಿದ ಕೂಸನ್ನು ತಮ್ಮದೆಂದು ಹೇಳುತ್ತಿದ್ದಾರೆ. ಅವರ ಮಗು ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕುಟುಕಿದ್ದಾರೆ.
ಕೊಡಗು ಪ್ರವೇಶಿಸಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮೆರವಣಿಗೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಗೆ ಹಣ ಬಿಡುಗಡೆಯಾಗಿರುವುದು ಮೋದಿ ಸರ್ಕಾರದಿಂದ. ಆದರೆ ಇದೀಗ ಕಾಂಗ್ರೆಸ್, ಜೆಡಿಎಸ್ ತಮ್ಮದೆಂಬಂತೆ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ದೇವೇಗೌಡರು ಬೇರೆ ಯಾರಿಗೋ ಹುಟ್ಟಿದ ಕೂಸನ್ನು ತನ್ನದೆಂಬಂತೆ ಹೇಳಿಕೊಳ್ಳುತ್ತಿದ್ದಾರೆ. ಅವರ ಕೂಸು ಯಾವುದೆಂದು ಅವರು ನೋಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯನವರಂತಹ ದುಷ್ಟರನ್ನು ನಾನೆಂದೂ ನೋಡಿಲ್ಲ. ಕುಂಕುಮ ಹಾಕುವವರನ್ನು ಕಂಡರೆ ಬೆಚ್ಚಿ ಬೀಳುತ್ತಿದ್ದ ಸಿದ್ದರಾಮಯ್ಯ ಈಗ ಹಣೆ ತುಂಬಾ ಕುಂಕುಮ ಹಾಕಿಕೊಂಡು ಓಡಾಡುತ್ತಿದ್ದಾರೆ. ಪರಮೇಶ್ವರ್, ಮುನಿರತ್ನ ಅವರನ್ನು ಸೋಲಿಸಿದ್ದಲ್ಲದೆ, ದಲಿತರಿಗೆ ಮೋಸ ಮಾಡಿದವರು ಅವರು ಎಂದು ಹರಿಹಾಯ್ದರು.
ಈ ಬಾರಿಯ ಚುನಾವಣೆಯಲ್ಲಿ ಜನರ ಆಸಕ್ತಿ ಬಿಜೆಪಿ ಪರ ಇದೆ. ಪೂರ್ಣ ಬಹುಮತದೊಂದಿಗೆ ಪಕ್ಷ ಆಡಳಿತಕ್ಕೆ ಬರುವುದು ಖಂಡಿತಾ ಎಂದವರು ತಿಳಿಸಿದರು.