ತೆಲಂಗಾಣ, ಮಾ 11 (DaijiworldNews/DB): ಯುವಕನೊಬ್ಬ ಇಬ್ಬರನ್ನು ಪ್ರೀತಿಸಿ ಮಕ್ಕಳಾದ ನಂತರ ಇಬ್ಬರು ಯುವತಿಯರನ್ನೂ ಮದುವೆಯಾದ ಪ್ರಸಂಗ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ಬುಡಕಟ್ಟು ಸಮುದಾಯದ ಭದ್ರಾದ್ರಿ-ಕೊತಗುಡೆಂ ಜಿಲ್ಲೆಯ ಚೆರ್ಲಾ ಮಂಡಲದ ಎರ್ರಬೋರು ಗ್ರಾಮದ ಸತ್ತಿಬಾಬು ಎಂಬಾತನೇ ಮಕ್ಕಳ ಸಮ್ಮುಖದಲ್ಲಿ ಯುವತಿಯರಿಬ್ಬರನ್ನು ವರಿಸಿದ ಯುವಕ. ಈತ ಕಳೆದ ಮೂರು ವರ್ಷಗಳಿಂದ ಸುನೀತಾ ಹಾಗೂ ಸ್ವಪ್ನಾ ಎಂಬ ಯುವತಿಯರೊಂದಿಗೆ ಸಂಬಂಧ ಹೊಂದಿದ್ದ. ಅಲ್ಲದೆ ಮದುವೆಗೂ ಮುನ್ನವೇ ಇಬ್ಬರಿಗೂ ಒಂದೊಂದು ಮಗುವಾಗಿತ್ತು. ಆದರೆ ಈ ವಿಚಾರ ಪರಸ್ಪರ ಇಬ್ಬರು ಯುವತಿಯರಿಗೂ ತಿಳಿದಿರಲಿಲ್ಲ.
ಇನ್ನು ಪ್ರೀತಿಸಿದ ಯುವತಿಯರ ಮನೆಯವರು ಮದುವೆಯಾಗುವುದಕ್ಕೆ ಸತ್ತಿಬಾಬುವಿಗೆ ದುಂಬಾಲು ಬಿದ್ದಿದ್ದಾರೆ. ಈ ವೇಳೆ ಇಬ್ಬರನ್ನೂ ಮದುವೆಯಾಗುವುದಾಗಿ ಆತ ಹೇಳಿದ್ದಾನೆ. ಹೀಗಾಗಿ ಮದುವೆ ಆಮಂತ್ರಣ ಪತ್ರವನ್ನೂ ಮುದ್ರಿಸಿ ಹಂಚಲಾಗಿದೆ. ವಿವಾಹದ ದಿನದಂದು ಅಧಿಕಾರಿಗಳು ಬಂದು ಮದುವೆ ನಿಲ್ಲಿಸುತ್ತಾರೆಂಬ ಭೀತಿಯಿಂದ ನಿಗದಿತ ಮುಹೂರ್ತಕ್ಕೆ ಮುನ್ನವೇ ಇಬ್ಬರು ಪ್ರೇಯಸಿಯರಿಗೂ ಮಕ್ಕಳ ಸಮ್ಮುಖದಲ್ಲಿ ತಾಳಿ ಕಟ್ಟಿದ್ದಾನೆ.