ಬೆಂಗಳೂರು, ಮಾ 11 (DaijiworldNews/DB): ಕರ್ನಾಟಕ ರಾಜ್ಯ ವಿಧಾನಸಭೆಗೆ ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯಲಿದ್ದು, ವಿಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, 80 ವರ್ಷ ಮೇಲ್ಪಟ್ಟ 12,15,763 ಲಕ್ಷ ಮತದಾರರಿದ್ದಾರೆ. ಈ ಪೈಕಿ 16,976 ಮಂದಿ 100 ವರ್ಷ ಮೇಲ್ಪಟ್ಟ ವರಾಗಿದ್ದಾರೆ. ಮತ್ತು 5.55 ಲಕ್ಷ ಪಿಡಬ್ಲ್ಯುಡಿ ಮತದಾರರು ರಾಜ್ಯದಲ್ಲಿದ್ದಾರೆ. ಇವರೆಲ್ಲರಿಗೂ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುವುದು. ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ವಿಕಲಚೇತನರಿಗೆ ವ್ಹೀಲ್ಚೇರ್ ವ್ಯವಸ್ಥೆ ಮಾಡಲಾಗುವುದು ಎಂದರು.
2,62,42,561 ಜನ ಪುರುಷ ಮತದಾರರು ಹಾಗೂ 2,59,26,319 ಮಹಿಳಾ ಮತದಾರರು ಸೇರಿ ರಾಜ್ಯದಲ್ಲಿ ಒಟ್ಟು 5,21,73,579 ಮಂದಿ ಮತದಾರರಿದ್ದಾರೆ. 9,17,241 ಮಂದಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸಲಿದ್ದಾರೆ. 4,699 ತೃತೀಯ ಲಿಂಗಿ ಮತದಾರರು ರಾಜ್ಯದಲ್ಲಿದ್ದಾರೆ ಎಂದು ವಿವರಿಸಿದರು.
ರಾಜ್ಯದಲ್ಲಿ 58,282 ಮತಗಟ್ಟೆ ಮತಗಟ್ಟೆಗಳಿರಲಿದ್ದು, ಈ ಪೈಕಿ 24,063 ನಗರ ಹಾಗೂ 34,219 ಮತಗಟ್ಟೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇರಲಿವೆ. ಪ್ರತಿ ಮತಗಟ್ಟೆಯಲ್ಲಿ 883 ಮಂದಿಗೆ ಮತದಾನಕ್ಕೆ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಹಣ, ಆಮಿಷಗಳಿಗೆ ಬಲಿಯಾಗದೇ ಅರ್ಹರನ್ನು ಆಯ್ಕೆ ಮಾಡಲು ಮತದಾರರು ಮುಂದಾಗಬೇಕು. ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ಉಂಟಾಗದಂತೆ ತೀವ್ರ ನಿಗಾ ಇಡಲಾಗುತ್ತದೆ. ಗಡಿ ಪ್ರದೇಶ, ಕರಾವಳಿ ಭಾಗಗಳಲ್ಲಿ ಹದ್ದಿನ ಕಣ್ಣು ಇರಲಿದೆ. ಯಾವುದೇ ಅಕ್ರಮಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು.