ಪಾಟ್ನಾ, ಮಾ 11 (DaijiworldNews/DB): ಗರ್ಭಿಣಿ ಪತ್ನಿ ಬಿಪಿ ಸಮಸ್ಯೆಯಿಂದಾಗಿ ಮೂರ್ಛೆ ತಪ್ಪಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸಿಬಿಐಗೆ ತಿಳಿಸಿದ್ದಾರೆ.
ಉದ್ಯೋಗಕ್ಕಾಗಿ ಭೂಮಿ ಹಗರಣ ಸಂಬಂಧಿಸಿ ಶನಿವಾರ ವಿಚಾರಣೆಗೆ ಹಾಜರಾಗಬೇಕೆಂದು ಸಿಬಿಐ ನೀಡಿದ ಸಮನ್ಸ್ಗೆ ಇಂದು ಪ್ರತಿಕ್ರಿಯಿಸಿರುವ ಅವರು, ಇಂದು ಸಿಬಿಐ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ನಿನ್ನೆ ನಿರಂತರವಾಗಿ 12 ಗಂಟೆ ಕಾಲ ಜಾರಿ ನಿರ್ದೇಶನಲಾಯ ಅಧಿಕಾರಿಗಳು ತನ್ನ ಗರ್ಭಿಣಿ ಪತ್ನಿಯನ್ನು ವಿಚಾರಣೆಗೊಳಪಡಿಸಿದ ನಂತರ ಆಕೆ ಬಿಪಿ ಸಮಸ್ಯೆಯಿಂದಾಗಿ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅವರನ್ನು ನಿನ್ನೆ ದೆಹಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕಾಗಿದೆ. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ, ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರಿಗೆ ಈ ಹಿಂದೆ ಸಿಬಿಐ ಮಾರ್ಚ್ 4ರಂದು ಸಮನ್ಸ್ ನೀಡಿತ್ತಾದರೂ ಅಂದು ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ಸಾಕ್ಷ್ಯಾಧಾರ ಹಾಗೂ ಕಾಗದದ ಟ್ರಯಲ್ ಆಧಾರದ ಮೇಲೆ ಮತ್ತೊಮ್ಮೆ ಸಮನ್ಸ್ ನೀಡಲಾಗಿತ್ತು.