ಜೈಪುರ, ಮಾ 12 (DaijiworldNews/DB): ಪುಲ್ವಾಮ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾಗಿದ್ದ ಯೋಧರ ಮಕ್ಕಳು ಮಾತ್ರವಲ್ಲದೆ, ಕುಟುಂಬದವರಿಗೂ ಮಾನವೀಯ ನೆಲೆಯಲ್ಲಿ ನೌಕರಿ ಸಿಗಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹುತಾತ್ಮ ಯೋಧರ ಪತ್ನಿಯರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಶನಿವಾರ ಹಿಂಸಾರೂಪಕ್ಕೆ ತಿರುಗಿದೆ. ಪೊಲೀಸರ ವಿರುದ್ದ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದರೆ, ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಪುಲ್ವಾಮ ಬಾಂಬ್ ಸ್ಪೋಟದಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗೆ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ ಹೋರಾಟ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಿದ್ದ ಮೂವರು ಹುತಾತ್ಮ ಯೋಧರ ಪತ್ನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದವರ ಯೋಗಕ್ಷೇಮ ವಿಚಾರಿಸುವ ಸಲುವಾಗಿ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರು ಆಸ್ಪತ್ರೆಯತ್ತ ತೆರಳುತ್ತಿದ್ದ ವೇಳೆ ಅವರನ್ನು ಶುಕ್ರವಾರ ಪೊಲೀಸರು ವಶಕ್ಕೆ ಪಡೆದಿದ್ದರು.
ಬಳಿಕ ಪೊಲೀಸರು ತಮ್ಮ ಮೇಲೆ ಹಲ್ಲೆಗೈದಿದ್ದಾರೆಂದು ಮೀನಾ ಆರೋಪಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಶನಿವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿವಾಸಕ್ಕೆ ಮೆರವಣಿಗೆ ಆರಂಭಿಸಿದ್ದಾರೆ. ಈ ವೇಳೆ ಯಾವುದೇ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ತಡೆದಿದ್ದಾರೆ. ಇದರಿಂದ ಕೆಲವು ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ ಬ್ಯಾರಿಕೇಡ್ಗಳನ್ನು ಧ್ವಂಸಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಆರಂಭಿಸಿ ಉದ್ರಿಕ್ತರನ್ನು ನಿಯಂತ್ರಿಸಿದರು. ಕೆಲವು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಇದೇ ವೇಳೆ ಬಂಧಿಸಿದ್ದಾರೆ.
ಇನ್ನು ಪೊಲೀಸರು ತಮ್ಮ ಮೇಲೆ ಹಲ್ಲೆಗೈದಿದ್ದಾರೆಂದು ಆರೋಪಿಸಿದ ಸಂಸದ ಮೀನಾ ಅವರು ಗೋವಿಂದಗಢದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಸವಾಯಿ ಮಾನ್ಸಿಂಗ್ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದಾರೆ.
ಯೋಧರ ಪತ್ನಿಯರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅಹವಾಲು ಆಲಿಸಿದರು. ಬಳಿಕ ಟ್ವೀಟ್ ಮಾಡಿದ ಅವರು, ಯೋಧರ ತ್ಯಾಗ ದೊಡ್ಡದು. ಅವರಿಗೆ ನನ್ನ ನಮನಗಳು. ರಾಜ್ಯ ಸರ್ಕಾರ ಅವರ ಬಗ್ಗೆ ಗರಿಷ್ಠ ಗೌರವ ಹೊಂದಿದೆ ಎಂದು ಬರೆದುಕೊಂಡಿದ್ದಾರೆ.