ರಾಜಸ್ಥಾನ, ಮಾ 12 (DaijiworldNews/DB): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮಾರ್ಫ್ ಮಾಡಿದ ಹಾಗೂ ಎಡಿಟ್ ಮಾಡಿದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ರಾಜಸ್ಥಾನದ ಪ್ರತಾಪ್ಗಢದಲ್ಲಿ ನಡೆದಿದೆ.
ಬಿಪಿನ್ ಕುಮಾರ್ ಸಿಂಗ್ ಶಾಂಡಿಲ್ಯ ಬಂಧಿತ ಆರೋಪಿ. ಲತಾ ಶರ್ಮಾ ಎಂಬವರು ನೀಡಿದ ದೂರಿನ ಮೇರೆಗೆ ಈತನ ವಿರುದ್ದ ಪೊಲೀಸರು ದೂರು ದಾಖಲಿಸಿ ಬಂಧಿಸಿದ್ದರು. ಈತನನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾರ್ಚ್ 14ರವರೆಗೆ ರಿಮಾಂಡ್ಗೆ ಕಳುಹಿಸಲಾಗಿದೆ ಎಂದು ಪ್ರತಾಪಗಢ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ಕುಮಾರ್ ತಿಳಿಸಿದ್ದಾರೆ.
ಬಂಧನಕ್ಕೂ ಮುನ್ನ ಆರೋಪಿಯಲ್ಲಿ ಸೋನಿಯಾ ಗಾಂಧಿಯವರ ಎಡಿಟ್ ಮಾಡಿದ ವೀಡಿಯೋವನ್ನು ತೆಗೆದು ಹಾಕುವಂತೆ ಪೊಲೀಸರು ಸೂಚಿಸಿದ್ದರು. ಆದರೆ ಆತ ಅದನ್ನು ಡಿಲೀಟ್ ಮಾಡದೇ ನಿರ್ಲಕ್ಷ್ಯ ವಹಿಸಿದ್ದ. ಹೀಗಾಗಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.