ಚೆನ್ನೈ, ಮಾ 12 (DaijiworldNews/DB): ಪ್ರತಿಭಟನಾನಿರತ ಪ್ರಯಾಣಿಕರೊಬ್ಬರ ಮೇಲೆ ಮಧುರೈ ವಿಮಾನ ನಿಲ್ದಾಣದಲ್ಲಿ ಹಲ್ಲೆಗೈದ ಆರೋಪದಡಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಎಐಎಡಿಎಂಕೆ ಶಾಸಕ ಪಿಆರ್ ಸೆಂಥಿಲ್ನಾಥನ್ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಗಂಗೈನಲ್ಲಿ ನಡೆದ ಎಐಎಡಿಎಂಕೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲೆಂದು ಚೆನ್ನೈ ವಿಮಾನ ನಿಲ್ದಾಣದಿಂದ ಪಳನಿಸ್ವಾಮಿ ಅವರು ಮಧುರೈಗೆ ತೆರಳುತ್ತಿದ್ದರು. ಈ ವೇಲೆ ವ್ಯಕ್ತಿಯೊಬ್ಬ ಫೇಸ್ಬುಕ್ ಲೈವ್ ಮಾಡಿದ್ದು, ತಾನು ಪಳನಿಸ್ವಾಮಿ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳಿದ್ದಾನಲ್ಲದೆ, ಅವರ ವಿರುದ್ದ ಘೋಷಣೆ ಕೂಗಿದ್ದಾನೆ. ಇನ್ನು ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾರಿಗೆ ಪಳನಿಸ್ವಾಮಿ ದ್ರೋಹ ಎಸಗಿದ್ದಾರೆ ಎಂದು ಆತ ಫೇಸ್ಬುಕ್ ಲೈವ್ನಲ್ಲೇ ಆರೋಪಿಸಿದ್ದಾನೆ.
ವ್ಯಕ್ತಿ ಈ ರೀತಿ ಆರೋಪ ಮಾಡುತ್ತಿರುವುದನ್ನು ನೋಡಿದ ಪಳನಿಸ್ವಾಮಿ ಅಂಗರಕ್ಷಕರು ಕೂಡಲೇ ಆತನ ಮೊಬೈಲ್ ಕಿತ್ತುಕೊಂಡು ವಿಮಾನ ನಿಲ್ದಾಣ ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೆ ಆತನನ್ನು ಪೊಲೀಸರ ವಶಕ್ಕೊಪ್ಪಿಸಿ ತನಿಖೆ ನಡೆಸಿದಾಗ ಆತ ಸಿಂಗಾಪುರದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಿಕೊಂಡಿದ್ದಾನೆ. ಇನ್ನು ಈತನ ಫೇಸ್ಬುಕ್ ಲೈವ್ನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡ ಮತ್ತೊಬ್ಬ ಪ್ರಯಾಣಿಕನನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.