ಮುಂಬೈ, ಮಾ 12 (DaijiworldNews/DB): ವಿಮಾನದಲ್ಲಿ ಧೂಮಪಾನ ಮಾಡಿದ್ದಲ್ಲದೆ ಸಹ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ ಅಮೆರಿಕಾ ಪ್ರಜೆಯೊಬ್ಬನ ವಿರುದ್ದ ಪ್ರಕರಣ ದಾಖಲಾಗಿದೆ.
ರಮಾಕಾಂತ್ (37) ಎಂಬಾತನ ವಿರುದ್ದ ಮುಂಬೈ ಸಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಯಾಣಿಸುವಾಗ ಧೂಮಪಾನಕ್ಕೆ ಅವಕಾಶವಿಲ್ಲದಿದ್ದರೂ, ಈತ ಮಾರ್ಚ್ 11ರಂದು ಲಂಡನ್-ಮುಂಬೈ ಮಾರ್ಗದ ಏರ್ ಇಂಡಿಯಾ ವಿಮಾನದಲ್ಲಿ ಬಾತ್ರೂಂಗೆ ಹೋಗಿ ಧೂಮಪಾನ ಮಾಡಿದ್ದ. ಆತನ ಕೈಯಲ್ಲಿ ಸಿಗರೇಟ್ ನೋಡಿದ ಸಿಬಂದಿ ಕೂಡಲೇ ಅದನ್ನು ಆತನಿಂದ ಕಸಿದು ಎಸೆದಿದ್ದಾರೆ. ಅಲ್ಲದೆ ಸಹ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಸಿಬಂದಿಯೊಂದಿಗೆ ಗಲಾಟೆ ಎಬ್ಬಿಸಿದ್ದ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಈತನ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್ 336 (ಮಾನವನ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಕಾರ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದ್ದು) ಮತ್ತು ಏರ್ಕ್ರಾಫ್ಟ್ ಆಕ್ಟ್ 1937, 22 (ಪೈಲಟ್-ಇನ್-ಕಮಾಂಡ್ ನೀಡಿದ ಕಾನೂನುಬದ್ಧ ಸೂಚನೆಯನ್ನು ಅನುಸರಿಸಲು ನಿರಾಕರಿಸಿದ್ದು), ಸೆಕ್ಷನ್ 23 ರ ಪ್ರಕಾರ (ಆಕ್ರಮಣ ಮತ್ತು ಇತರ ಕ್ರಿಯೆಗಳು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತವೆ ಅಥವಾ ಉತ್ತಮ ಕ್ರಮ ಮತ್ತು ಶಿಸ್ತಿಗೆ ಅಪಾಯವನ್ನುಂಟುಮಾಡುತ್ತವೆ) ಮತ್ತು ಧೂಮಪಾನ ಮಾಡಿದ್ದಕ್ಕಾಗಿ ಸೆಕ್ಷನ್ 25 ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.