ಲಖನೌ, ಮಾ 12 (DaijiworldNews/DB): ಆಯುರ್ವೇದವು ಭಾರತದ ಸಾಂಪ್ರದಾಯಿಕ ವೈದ್ಯ ಪದ್ದತಿ. ವಿಶ್ವದ ಜನರ ಆರೋಗ್ಯದ ದೃಷ್ಟಿಯಿಂದ ಈ ಪದ್ದತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶದ ಮೀರತ್ನಲ್ಲಿರುವ ಚೇಲಾತ್ರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಆಯುರ್ವೇದ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶೀಯ ಯೋಗ ಪದ್ದತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಂಡಿದೆ. ಇದು ವಿಶ್ವದ ಸಾಕಷ್ಟು ಜನರಿಗೆ ಸಹಕಾರಿಯಾಗಿದೆ. ಅದರಂತೆ ಆಯುರ್ವೇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಲಾಗುವುದು. ಆ ಮೂಲಕ ಭಾರತದ ಪ್ರಾಚೀನ ವೈದ್ಯ ಪದ್ದತಿಯನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದರು.
ಇಡೀ ಪ್ರಪಂಚದಲ್ಲಿ ಸುಸಂಸ್ಕೃತ, ಪ್ರಾಚೀನ ಪರಂಪರೆಗಳನ್ನು ಹೊಂದಿದ ದೇಶ ಭಾರತ. ಪಾಶ್ಚಿಮಾತ್ಯ ದೇಶಗಳು ವರ್ಣಮಾಲೆ ಕಲಿಕಾ ಹಂತದಲ್ಲಿರುವಾಗ ಭಾರತದ ವಿವಿಧ ಭಾಷೆಗಳಲ್ಲಿ ಸಾಹಿತ್ಯ ನಿರ್ಮಾಣವಾಗಿತ್ತು. ನಮ್ಮ ಪೂರ್ವಜರು ವಿಶಿಷ್ಟ ಔಷಧೀಯ ಪದ್ದತಿಗಳನ್ನು ಸಂಶೋಧಿಸಿ ಆರೋಗ್ಯದಲ್ಲಿನ ಸದೃಢತೆಗೆ ಕಾರಣಕರ್ತರಾದರು. ಇದರಿಂದಾಗಿ ಭೀಕರ ರೋಗಗಳಿಂದ ಮುಕ್ತವಾಗಲು ಸಾಧ್ಯವಾಯಿತು ಎಂದವರು ಅಭಿಪ್ರಾಯಪಟ್ಟರು.
ಯೋಗ, ಆಯುರ್ವೇದ, ಸಿದ್ಧ, ಯುನಾನಿ ಮತ್ತು ಪ್ರಕೃತಿ ಚಿಕಿತ್ಸೆಗಳಿಂದ ಮಾರಣಾಂತಿಕ ಕಾಯಿಲೆಗಳ ನಿವಾರಣೆಯೂ ಸಾಧ್ಯ. ಇದರ ಪ್ರಯೋಜನ ವಿಶ್ವದ ಜನರಿಗೂ ಆಗಬೇಕು. ಯೋಗದಿಂದ ರೋಗಮುಕ್ತ ಜೀವನ ನಡೆಸುತ್ತಿರುವಂತೆ ಆಯುರ್ವೇದ ಪದ್ದತಿಯ ಔಷಧ ಪರಂಪರೆಗಳಿಂದಲೂ ರೋಗವಾಸಿಯಾಗಲು ನಾವು ವಿಶ್ವದ ಜನರಿಗೆ ನೆರವಾಗಬೇಕು ಎಂದರು.