ಮಂಡ್ಯ, ಮಾ 12 (DaijiworldNews/DB): ಕಾಂಗ್ರೆಸ್ನವರು ನನ್ನ ಸಮಾಧಿಯ ಕನಸು ಕಾಣುತ್ತಿದ್ದಾರೆ. ಆದರೆ ಈ ದೇಶದ ಕೋಟಿ ತಾಯಂದಿರ, ಜನ ಆಶೀರ್ವಾದ ಮೋದಿಯ ರಕ್ಷಾಕವಚವಾಗಿ ನಿಂತಿದೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ಉದ್ಘಾಟಿಸಿ ಸಮಾವೇಶದಲ್ಲಿ ಭಾನುವಾರ ಮಾತನಾಡಿದ ಅವರು, ಇಲ್ಲಿ ನಿರ್ಮಾಣವಾದ ಆಧುನಿಕ ಎಕ್ಸ್ಪ್ರೆಸ್ ವೇ ದೇಶದ ವಿವಿಧೆಡೆಗಳಲ್ಲಿ ಆಗಬೇಕೆಂಬುದು ದೇಶವಾಸಿಗಳ ಹೆಬ್ಬಯಕೆಯಾಗಿದೆ. ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ ಅವರಂತಹ ಮಹಾನ್ ವ್ಯಕ್ತಿಗಳನ್ನು ದೇಶಕ್ಕೆ ನೀಡಿದ ಪುಣ್ಯಭೂಮಿ ಇದು. ಅವರ ಪ್ರೇರಣೆಯೇ ಅಭಿವೃದ್ದಿಯ ದೂರದರ್ಶಿತ್ವಕ್ಕೆ ಕನ್ನಡಿಯಾಗಿದೆ ಎಂದರು.
ತಂತ್ರಜ್ಞಾನ ಮತ್ತು ಪರಂಪರೆಗೆ ಹೆಸರಾದ ಬೆಂಗಳೂರು ಹಾಗೂ ಮೈಸೂರನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಸಂಪರ್ಕಿಸುವುದಕ್ಕೆ ಹಲವು ಮುಖ್ಯ ಕಾರಣಗಳಿವೆ. ಎಕ್ಸ್ಪ್ರೆಸ್ ವೇಯೊಂದಿಗೆ ಇಲ್ಲಿನ ಅಭಿವೃದ್ದಿಯ ವೇಗವೂ ಹೆಚ್ಚಲಿದೆ. ಪ್ರವಾಸೋದ್ಯಮವೂ ಹೊಸತನ ಪಡೆಯಲಿದೆ ಎಂದವರು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಡವರ ಅಭಿವೃದ್ದಿಗಾಗಿ ಬಳಸಬೇಕಾದ ಹಣವನ್ನು ಲೂಟಿ ಮಾಡಿತ್ತು. ಆದರೆ ಆನಂತರ ಬಡವರ ಕಷ್ಟ ಅರಿತ ಸರ್ಕಾರ ಬಂದ ಕಾರಣ ಪ್ರತಿ ಬಡವನ ಮನೆಯಲ್ಲಿ ನಗು ಅರಳುತ್ತಿದೆ ಎಂದರು.