ಧಾರವಾಡ, ಮಾ. 12 (DaijiworldNews/SM): ಪ್ರಧಾನಿ ನರೇಂದ್ರ ಮೋದಿ ರವಿವಾರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ದೇಶದ ಪ್ರಜಾಪ್ರಭುತ್ವದ ಕುರಿತು ಮಾತನಾಡಿದ್ದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಶ್ವದ ಯಾವುದೇ ಶಕ್ತಿಯು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ 'ಕ್ರೂರ ದಾಳಿ'ಗೆ ಒಳಗಾಗಿವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇಂತಹ ಹೇಳಿಕೆ 12 ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರ, ಕರ್ನಾಟಕದ ಜನರು, ಭಾರತದ ಶ್ರೇಷ್ಠ ಸಂಪ್ರದಾಯಗಳು ಮತ್ತು ಅದರ ನಾಗರಿಕರಿಗೆ ಮಾಡಿದ ಅವಮಾನ ಎಂದು ಮೋದಿ ಹೇಳಿದರು.
ಕರ್ನಾಟಕದಲ್ಲಿ ಬಸವೇಶ್ವರರನ್ನು ಹೆಚ್ಚಾಗಿ ಆರಾಧಿಸಲಾಗುತ್ತದೆ. ವಿಶೇಷವಾಗಿ ಆಡಳಿತಾರೂಢ ಬಿಜೆಪಿಯ ಪ್ರಮುಖ ಮತ ಬ್ಯಾಂಕ್ ಆಗಿರುವ ಲಿಂಗಾಯತ ಸಮುದಾಯ ರಾಜ್ಯದಲ್ಲಿ ಹೆಚ್ಚಾಗಿ ಬಸವೇಶ್ವರರ ಆರಾಧಕರಾಗಿರುವುದರಿಂದ ಪ್ರಧಾನಿ ಹೇಳಿಕೆಯನ್ನು ರಾಜಕೀಯ ಪ್ರಾಮುಖ್ಯತೆಯೊಂದಿಗೆ ನೋಡಲಾಗುತ್ತಿದೆ. ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪ್ರಧಾನಿ ಮೋದಿ ಈ ವರ್ಷ ಆರನೇ ಬಾರಿಗೆ ಕರ್ನಾಟಕಕ್ಕೆ ಆಗಮಿಸಿದ್ದಾರೆ.