ನವದೆಹಲಿ, ಮಾ 13 (DaijiworldNews/MS): 'ದಿ ಎಲಿಫೆಂಟ್ ವಿಸ್ಪರರ್ಸ್' (The Elephant Whisperers) ಒಂದು ಕಿರು ಸಾಕ್ಷ್ಯಚಿತ್ರ ಭಾರತದ ದೊಡ್ದ ದೊಡ್ಡ ಸಿನಿಮಾ ಮಾಡಲಾಗದ್ದನ್ನು ಮಾಡಿ ತೋರಿಸಿದ್ದು ಭಾರತಕ್ಕಾಗಿ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರವು 95ನೇ ಅಕಾಡೆಮಿ ಪ್ರಶಸ್ತಿಯಲ್ಲಿBest Documentary Short Subject ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಸಮಾರಂಭದ ಅತ್ಯಂತ ಖುಷಿಯ ಕ್ಷಣಗಳಲ್ಲಿ, ಚಿತ್ರದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮಾತನಾಡಿ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸಿದ್ದಾರೆ.
ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿಗೆ ನಿರ್ದೇಶನ ಮಾಡಿರುವ ಕಾರ್ತಿಕಿ ಗೊನ್ಸಾಲ್ವೆಸ್ ಅವರು ಮೂಲತಃ ತಮಿಳುನಾಡಿನ ಊಟಿಯವರು. ಕಾರ್ತಿಕಿ ವೃತ್ತಿಯಲ್ಲಿ ಫೋಟೊ ಜರ್ನಲಿಸ್ಟ್ ಕೂಡ ಹೌದು. ಇವರು ಮುಂಬೈನಲ್ಲಿ ನೆಲೆಸಿದ್ದು ವನ್ಯಜೀವಿ, ಪರಿಸರ-ಪ್ರಕೃತಿ ಬಗ್ಗೆ ಅಪಾರ ಕಾಳಜಿ-ಆಸಕ್ತಿ ಹೊಂದಿರುವ ಕಾರ್ತಿಕಿ ಉತ್ತಮ ಡಾಕ್ಯುಮೆಂಟರಿ ಫಿಲ್ಮ್ ಮೇಕರ್. ಈ ಹಿಂದೆ ಕ್ಯಾಮೆರಾ ಅಪರೇಟರ್ ಆಗಿ ಅನಿಮಲ್ ಪ್ಲಾನೆಟ್ ಮತ್ತು ಡಿಸ್ಕವರಿ ಚಾನೆಲ್ಗಳಿಗೆ ಕಾರ್ತಿಕಿ ಕೆಲಸ ಮಾಡಿದ್ದಾರೆ. ಭಾರತದ ಬುಡಕಟ್ಟು ಸಮುದಾಯಗಳನ್ನು ಮತ್ತು ಪ್ರಕೃತಿಯೊಂದಿಗೆ ಅವರ ಒಡನಾಟವನ್ನು ದಾಖಲಿಸಲು ಹಲವೆಡೆ ಪ್ರಯಾಣಿಸಿದ್ದಾರೆ. ಎಲಿಫೆಂಟ್ ವಿಸ್ಪರರ್ಸ್ ಅದೇ ಥೀಮ್ನಲ್ಲಿ ಮೂಡಿಬಂದಿದೆ.
41 ನಿಮಿಷಗಳ 'ದಿ ಎಲಿಫೆಂಟ್ ವಿಸ್ಪರರ್ಸ್' ಮೂಲಕ ಭಾರತಕ್ಕೆ ಕೀರ್ತಿ ತಂದ ಕಾರ್ತಿಕಿ ಆಸ್ಕರ್ನಲ್ಲಿ ತನ್ನ ಸ್ವೀಕಾರ ಭಾಷಣದ ಸಮಯದಲ್ಲಿ, ಅವರು ಪ್ರಶಸ್ತಿಯನ್ನು ' ಮಾತೃಭೂಮಿ ಭಾರತ'ಕ್ಕೆ ಅರ್ಪಿಸಿದ್ದಾರೆ.
ಎಲಿಫೆಂಟ್ ವಿಸ್ಪರರ್ಸ್ ನ ಕಥೆಯ ಹೂರಣವೇನು?
ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಕ್ಷಿಣ ಭಾರತೀಯ ದಂಪತಿಯ ಕಥೆಯನ್ನು ‘ದಿ ಎಲಿಫೆಂಟ್ ವಿಸ್ಪರರ್ಸ್’ಡಾಕ್ಯುಮೆಂಟರಿಯು ಹೊಂದಿದೆ.
ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ಮಿಸಲಾದ ಈ ಸಾಕ್ಷ್ಯಚಿತ್ರದಲ್ಲಿ ಸ್ಥಳೀಯ ದಂಪತಿಗಳಾದ ಬೊಮ್ಮನ್ ಮತ್ತು ಬೆಳ್ಳಿಯ ಆರೈಕೆಯಲ್ಲಿ ಬೆಳೆದ ರಘು ಎಂಬ ಅನಾಥ ಆನೆ ಮರಿಯ ಕಥೆ ಹೇಳಲಾಗಿದೆ. ಗಾಯಗೊಂಡ ಆನೆ ಮರಿ ಶುಶ್ರೂಷೆ ಮಾಡಲು ಪ್ರಯತ್ನಿಸಿದಾಗ ದಂಪತಿಗಳು ಮತ್ತು ಆನೆಯ ನಡುವೆ ಬಲವಾದ ಬಂಧವು ಹೇಗೆ ಬೆಳೆಯುತ್ತದೆ ಎಂದು ವಿವರಿಸಲಾಗಿದೆ. ಈ ಸಾಕ್ಷ್ಯಚಿತ್ರವು ಆನೆ ಮತ್ತು ಆ ದಂಪತಿ ನಡುವೆ ಬೆಳೆಯುವ ಬಾಂಧವ್ಯವನ್ನು ಮಾತ್ರವಲ್ಲದೆ ಅವರ ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯ ವರ್ಣಿಸುವ ಕಥೆಯಾಗಿದೆ.
ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಪ್ರಶಸ್ತಿ ಎಷ್ಟು ವಿಶೇಷವಾಗಿದೆ?
ಈ ಎಲಿಫೆಂಟ್ ವಿಸ್ಪರರ್ಸ್ ಭಾರತೀಯ ಚಲನಚಿತ್ರಗಳಿಗೆ ದಶಕಗಳ ಆಸ್ಕರ್ ಬರವನ್ನು ಕೊನೆಗೊಳಿಸಿದೆ ಎಂದರೆ ತಪ್ಪಾಗಲಾರದು. ಕಳೆದ ಐದು ದಶಕಗಳಲ್ಲಿ, ಮದರ್ ಇಂಡಿಯಾ ಮತ್ತು ಲಗಾನ್ ನಂತಹ ಸಿನಿಮಾಗಳಿಂದ ಹಿಡಿದು ಸಾಕ್ಷ್ಯಚಿತ್ರಗಳು ಮತ್ತು ಅನಿಮೇಟೆಡ್ ವೈಶಿಷ್ಟ್ಯಗಳವರೆಗೆ ಹಲವಾರು ಭಾರತೀಯ ಚಲನಚಿತ್ರಗಳು ಪ್ರತಿಷ್ಠಿತ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತ್ತು. ಆದರೆ ಕೊನೆಯ ಹಂತದಲ್ಲಿ ಅನೇಕ ಚಿತ್ರಗಳು ಎಡವಿ ಬಿದ್ದಿದ್ದು ಇದೆ. ಪ್ರಾಣಿ-ಆಧಾರಿತ ಚಲನಚಿತ್ರಗಳ ಮೇಲಿನ ಅಕಾಡೆಮಿಯ ಪ್ರೀತಿ ಮತ್ತು ಚಲನಚಿತ್ರವು ಈ ಹಿಂದೆ ಸ್ವೀಕರಿಸಿದ ಪುರಸ್ಕಾರಗಳಿಂದಾಗಿ ಭಾರತೀಯ ಈ ಕಿರುಚಿತ್ರವು ಆಸ್ಕರ್ನಲ್ಲಿ ಗೆಲ್ಲುತ್ತದೆ ಎಂದು ಅನೇಕ ಸಿನಿತಜ್ಞರು ಊಹಿಸಿದ್ದು ಇದೀಗ ಆಸ್ಕರ್ ಪ್ರಶಸ್ತಿ ತನ್ನದಾಗಿಸುವ ಮೂಲಕ ಇದೆಲ್ಲವನ್ನು ನನಸಾಗಿಸಿದೆ.