ನವದೆಹಲಿ, ಮಾ 13 (DaijiwordNews/HR): ದೆಹಲಿಯ ನೈಋತ್ಯ ಪ್ರದೇಶದಲ್ಲಿ 7 ಮತ್ತು 5 ವರ್ಷ ವಯಸ್ಸಿನ ಸೋದರರನ್ನು ಬೀದಿನಾಯಿಗಳ ಗುಂಪೊಂದು ದಾಳಿ ನಡೆಸಿ ಕೊಂದಿರುವ ಘಟನೆ ನಡೆದಿದೆ.
ಮೃತ ಮಕ್ಕಳನ್ನು ಆನಂದ್ ಮತ್ತು ಆತನ ಕಿರಿಯ ಸಹೋದರ ಆದಿತ್ಯ ಎಂದು ಗುರುತಿಸಲಾಗಿದೆ.
ಈ ಇಬ್ಬರೂ ಮಕ್ಕಳು ದೆಹಲಿಯ ವಸಂತ್ ಕುಂಜ್ ನಿವಾಸಿಗಳಾಗಿದ್ದು, ವಸಂತ್ ಕುಂಜ್ ಪೊಲೀಸರಿಗೆ ಮಾರ್ಚ್ 10 ರಂದು ಮಧ್ಯಾಹ್ನ 3 ಗಂಟೆಗೆ ಮಗು ಕಾಣೆಯಾಗಿರುವ ದೂರು ದಾಖಲಾಗಿತ್ತು. ತೀವ್ರ ಹುಡುಕಾಟದ ಎರಡು ಗಂಟೆಗಳ ಹುಡುಕಾಟದ ಬಳಿಕ ನಿರ್ಜನ ಪ್ರದೇಶದಲ್ಲಿನ ಗೋಡೆಯ ಬಳಿ ಆನಂದ್ ಮೃತ ದೇಹ ಪತ್ತೆಯಾಗಿದೆ.
ಇನ್ನು ಮಾರ್ಚ್ 12ರಂದು ಒಂದು ಮಗುವನ್ನು ಕಳೆದುಕೊಂಡಿದ್ದು, ಆನಂದ್ ಕಿರಿಯ ಸೋದರ ಆದಿತ್ಯ ತನ್ನ ಸೋದರಸಂಬಂಧಿ ಚಂದನ್ ಎಂಬಾತನೊಂದಿಗೆ ಮೂತ್ರ ವಿಸರ್ಜನೆಗೆ ಹೋಗಿದ್ದು, ಈ ವೇಳೆ, ಚಂದನ್ ಆದಿತ್ಯನಿಂದ ಸ್ವಲ್ಪ ದೂರದಲ್ಲಿದ್ದನು. ಸ್ವಲ್ಪ ಸಮಯದ ನಂತರ ಬೀದಿ ನಾಯಿಗಳು ಆದಿತ್ಯನನ್ನು ಸುತ್ತುವರಿದು, ತೀವ್ರವಾಗಿ ಗಾಯಗೊಳಿಸಿದ್ದು, ಅದೇ ಸಮಯದಲ್ಲಿ ದೆಹಲಿ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಒಬ್ಬರು ಆ ಸ್ಥಳದ ಪಕ್ಕದಲ್ಲಿ ಇದ್ದರು. ತಕ್ಷಣವೇ ಗಾಯಗೊಂಡ ಬಾಲಕನನ್ನು ತನ್ನ ಕಾರಿನಲ್ಲಿ ವಸಂತ್ ಕುಂಜ್ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.