ನವದೆಹಲಿ, ಮಾ 14 (DaijiworldNews/DB): ಎಚ್3ಎನ್2 ವೈರಸ್ ಬಾಧಿತರ ಸಂಖ್ಯೆ ಭಾರತದಲ್ಲಿ ದಿನೇದಿನೇ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆದಾಗ್ಯೂ ಸಾರ್ವಜನಿಕರಲ್ಲಿ ಧೈರ್ಯ ತುಂಬಲು ವೈದ್ಯರು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಈ ವೈರಸ್ ಸಾಮಾನ್ಯವಾಗಿ ಪ್ರಾಣಾಪಾಯಕ್ಕೆ ಕಾರಣವಾಗದು ಎನ್ನುತ್ತಾರೆ ದೆಹಲಿಯ ಗಂಗಾ ರಾಮ್ ಆಸ್ಪತ್ರೆಯ ಡಾ. ಧೀರೇನ್ ಗುಪ್ತಾ. ಇನ್ನು ಕೋವಿಡ್ ಸಾಂಕ್ರಾಮಿಕವಾಗಿ ಇದೂ ಕೂಡಾ ಬದಲಾಗುತ್ತದೆಯೇ ಎಂಬ ಬಗ್ಗೆ ವಿವಿಧ ವೈದ್ಯರುಗಳು ವಿವರಿಸಿದ್ದಾರೆ.
ದೆಹಲಿ ಪ್ರೈಮಸ್ ಆಸ್ಪತ್ರೆಯ ಪಲ್ಮನರಿ ವಿಭಾಗ ಮುಖ್ಯಸ್ಥ ಡಾ. ಎಸ್.ಕೆ. ಛಾಬ್ರಾ ಅವರ ಪ್ರಕಾರ, ಕೋವಿಡ್ ಮತ್ತು ಇನ್ಫ್ಲುಯೆನ್ಝ ಎರಡೂ ಉಸಿರಾಟದ ಸೋಂಕು ಹಾಗೂ ಒಂದೇ ರೀತಿ ಹರಡುತ್ತವೆ. ರೋಗಲಕ್ಷಣಗಳೂ ಒಂದೇ ರೀತಿ ಆಗುತ್ತವೆ. ಆದರೆ ಎರಡರ ನಡುವೆ ಯಾವುದೇ ಸಂಬಂಧವಿಲ್ಲ. ಇನ್ಫ್ಲುಯೆನ್ಝವು ಶೀತ, ದೇಹದ ನೋವು, ತಲೆನೋವು ಉಂಟು ಮಾಡುವ ಸಾಧ್ಯತೆ ಇದೆ. ಕೋವಿಡ್ನಿಂದ ಬಳಲಿದವರಿಗೆ ಈ ಸೋಂಕು ತಗುಲಿದರೆ ಅಪಾಯ ಹೆಚ್ಚು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದ್ದಾರೆ.
ಮಾರ್ಚ್ 9ರವರೆಗೆ ಎಚ್3ಎನ್2ನ ವಿವಿಧ ಉಪ ವಿಭಾಗಗಳಲ್ಲಿ ಒಟ್ಟು 3038 ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಹರಿಯಾಣ ಹಾಗೂ ಕರ್ನಾಟಕದಲ್ಲಿ ತಲಾ ಒಂದರಂತೆ ಒಟ್ಟು ಎರಡು ಸಾವುಗಳು ಸಂಭವಿಸಿವೆ. ಆದರೆ ದಿನೇದಿನೇ ದೇಶದಲ್ಲಿ ಈ ವೈರಸ್ನ ದೃಢ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿರುವುದರಿಂದ ಜನರು ಹೆಚ್ಚು ಕಾಳಜಿ ವಹಿಸಬೇಕು ಎಂದವರು ಮನವಿ ಮಾಡಿದ್ದಾರೆ.
ಹಂದಿಗಳ ನಡುವೆ ಹರಡಿ ಮನುಷ್ಯನಿಗೆ ಬಾಧಿಸುತ್ತದೆ ಎಂದೂ ವೈದ್ಯರು ಹೇಳುತ್ತಾರೆ. ಆದರೆ ಸದ್ಯ ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದರಿಂದ ಮಳೆಗಾಲದ ನಂತರ ಇದರ ಹರಡುವಿಕೆ ಸಾಧ್ಯತೆಗಳು ಕ್ಷೀಣಿಸಬಹುದು ಎನ್ನಲಾಗಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದರಿಂದ ಈ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.