ಬೆಂಗಳೂರು, ಮಾ 14 (DaijiworldNews/DB): ಕರ್ನಾಟಕದಲ್ಲಿ ಈ ಬಾರಿ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಉತ್ತರ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ವಿವಿಧೆಡೆ ಅವಧಿಗೆ ಮುನ್ನವೇ ಪೂರ್ವ ಮುಂಗಾರು ಮಳೆಯಾಗಲಿದೆ. ಇನ್ನು ದೇಶದ ವಿವಿಧೆಡೆಯೂ ಇದೇ ಪರಿಸ್ಥಿತಿ ತಲೆದೋರಬಹುದು. ಮಾರ್ಚ್ 15ರ ತನಕ ದೇಶದ ಉತ್ತರ ಹಾಗೂ ಕೇಂದ್ರ ಭಾಗಗಳಲ್ಲಿ ಹಗುರವಾದ ಮಳೆ ಬೀಳುವ ಸಾಧ್ಯತೆ ಇದೆ. ಮಾರ್ಚ್ 16ರಿಂದ 22ರ ತನಕ ದೇಶದ ದಕ್ಷಿಣ ಭಾಗದಲ್ಲಿ ಮಳೆಯಾಗಲಿದೆ. ಈ ಮಳೆ ಬಿರುಗಾಳಿ ಸಹಿತ ಸುರಿಯಲಿದೆ ಎಂದಿದ್ದಾರೆ.
ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ ಅಕಾಲಿಕ ಮಳೆ ಬಂದ ಹಿನ್ನೆಲೆಯಲ್ಲಿ ಬೆಳೆ ಹಾನಿಗೂ ಕಾರಣವಾಗುವ ಸಾಧ್ಯತೆ ಇದೆ. ಇನ್ನು ಫೆಬ್ರವರಿಯಲ್ಲಿ ಅತಿ ಹೆಚ್ಚಿನ ಬಿಸಿಲು ಈ ಬಾರಿ ದಾಖಲೆಯಾಗಿದೆ. ಇದು 1901ರ ಬಳಿಕ ಇದೇ ಮೊದಲು. ವಾತಾವರಣದಲ್ಲಿ ಆದ ಈ ಬದಲಾವಣೆ ಅವಧಿಪೂರ್ವ ಮುಂಗಾರಿಗೆ ಕಾರಣವಾಗಲಿದೆ. ಇದಕ್ಕೆ ಉಷ್ಣಾಂಶ ಹೆಚ್ಚಳವೂ ಒಂದು ಕಾರಣ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.