ಬೆಂಗಳೂರು, ಮಾ 14 (DaijiworldNews/HR): ಅಭಿವೃದ್ಧಿಯ ಮೇಲೆ ಚುನಾವಣೆಯಲ್ಲಿ ಮತ ಕೇಳಬೇಕಿದ್ದ ಬಿಜೆಪಿ, ಮತ ಫಸಲಿಗೆ ಅಡ್ಡದಾರಿಗಳನ್ನು ಕಂಡುಕೊಂಡು ಸಮುದಾಯ, ಧರ್ಮಗಳ ಜತೆ ಚೆಲ್ಲಾಟ ಆಡುತ್ತಿದೆ. ಸ್ವಾಭಿಮಾನಿ ಒಕ್ಕಲಿಗರ ಆತ್ಮಾಭಿಮಾನವನ್ನು ಕೆಣಕಿ ಬಿಜೆಪಿ ಬಹುದೊಡ್ಡ ತಪ್ಪು ಮಾಡಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಇತಿಹಾಸ ತಿರುಚಿ ಕಪೋಲಕಲ್ಪಿತ ಪಾತ್ರಗಳನ್ನು ಸೃಷ್ಟಿಸಿ, ಕೋಮುದ್ವೇಷದ ವಿಷಬೀಜ ಬಿತ್ತಿ, ಅದನ್ನು ಹೆಮ್ಮರವಾಗಿ ಬೆಳೆಯಲು ತನು-ಮನ-ಧನವನ್ನೆಲ್ಲ ಅರ್ಪಿಸುವ ಪಕ್ಷವೇ ಬಿಜೆಪಿ. ಈಗ ಒಕ್ಕಲಿಗರ ಹೆಗಲ ಮೇಲೆ ಕೋವಿ ಇಟ್ಟು ಹೊಸ ಸುಳ್ಳಿನಕಥೆ ಸೃಷ್ಟಿ ಮಾಡಿ ಅಸಲಿ ಇತಿಹಾಸವನ್ನು ಕೊಲ್ಲುವ ಹುನ್ನಾರ ನಡೆಸಿದೆ. ಟಿಪ್ಪುವನ್ನು ಕೊಂದವರೆಂದು ಚರಿತ್ರೆಯಲ್ಲಿ ಇಲ್ಲದ ಉರಿಗೌಡ, ನಂಜೇಗೌಡರೆಂಬ ಒಕ್ಕಲಿಗ ಕಾಲ್ಪನಿಕ ಹೆಸರುಗಳನ್ನು ಸೃಷ್ಟಿಸಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಸಿದ ಮಹಾದ್ವಾರಕ್ಕೆ ಇಟ್ಟಿದ್ದು ಮಂಡ್ಯಕ್ಕೆ, ಅದರಲ್ಲೂ ಸಮಸ್ತ ಒಕ್ಕಲಿಗರ ಕುಲಕ್ಕೆ ಮಾಡಿದ ಘೋರ ಅಪಮಾನ. ಮೇಲಾಗಿ, ಮಹಾದ್ವಾರಕ್ಕೆ ಮೊದಲೇ ಇದ್ದ ಪರಮಪೂಜ್ಯ ಗುರುಗಳಾದ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ಹೆಸರನ್ನು ಮುಚ್ಚಿಟ್ಟು, ಅವರ ಜಾಗದಲ್ಲಿ ಈ ಕಾಲ್ಪನಿಕ ಪಾತ್ರಗಳ ಹೆಸರನ್ನು ಹಾಕಿದ ದುರುದ್ದೇಶವೇನು? ಇದು ಪರಮಪೂಜ್ಯರಿಗೆ ಮಾಡಿದ ಅಪಮಾನ ಎಂದರು.
ಇನ್ನು ಇಂತಹ ಚಿಲ್ಲರೆ, ದ್ವೇಷದ ನಡೆಯಿಂದ ಒಕ್ಕಲಿಗರ ಮನ ಗೆಲ್ಲಬಹುದು ಎನ್ನುವುದು ಭ್ರಮೆ, ಮೂರ್ಖತನದ ಪರಮಾವಧಿ. ಹೆಸರು ಬದಲಿಸಿದ ನಂತರ ಸಾರ್ವಜನಿಕರು, ಸ್ಥಳೀಯರು, ಕನ್ನಡಪರ, ಪ್ರಗತಿಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದೇ ತಡ, ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಕಾಲ್ಪನಿಕ ಹೆಸರಗಳನ್ನು ತೆರವುಗೊಳಿಸಿ ಗೌರವ ಉಳಿಸಿಕೊಂಡಿದೆ. ಇಂತಹ ಲಜ್ಜಗೇಡಿ ನಡೆ ರಾಜ್ಯ ಬಿಜೆಪಿ ಸರಕಾರದ ನೀಚ ರಾಜಕಾರಣಕ್ಕೆ ಸಾಕ್ಷಿ. ಪ್ರಧಾನಿ ಮೋದಿ ಅವರನ್ನು ಮೆಚ್ಚಿಸಲು ಉರಿಗೌಡ, ನಂಜೇಗೌಡ ಹೆಸರುಗಳನ್ನು ಸೃಷ್ಟಿಸಲಾಯಿತಾ? ಅಥವಾ ಆ ಷಡ್ಯಂತ್ರಕ್ಕೆ ರಾಜ್ಯ ಸರಕಾರದ ಒಪ್ಪಿಗೆಯೂ ಇತ್ತಾ? ಇಲ್ಲವೇ, ಇಂಥ ಹೊಣೆಗೇಡಿ ಕೃತ್ಯದ ಬಗ್ಗೆ ಪ್ರಧಾನಿ ಕಚೇರಿಗೂ ಮಾಹಿತಿ ಇತ್ತೆ ಎಂದು ತಿಳಿಯಬೇಕಿದೆ ಎಂದಿದ್ದಾರೆ.
ತಾಳ್ಮೆ, ಸ್ವಾಭಿಮಾನ, ಸ್ವಂತಿಕೆ, ಸೇವೆ, ಸೌಹಾರ್ದತೆ, ಸಮನ್ವಯ ತತ್ತ್ವದ ತಳಹದಿಯ ಮೇಲೆ ಬೆಳೆದಿದೆ ಒಕ್ಕಲಿಗ ಸಮುದಾಯ. ದ್ವೇಷ ಮತ್ತು ಹಸಿಸುಳ್ಳುಗಳನ್ನು ಅವರೆಂದು ಪೋಷಿಸಿ ಬೆಳೆಸಿದವರಲ್ಲ. ಒಂದೀಡಿ ಸಮುದಾಯವನ್ನು ಇಂಥ ನಿಕೃಷ್ಟ ರಾಜಕಾರಣಕ್ಕೆ ಇಳಿಸಿ, ಬಳಸಬಹುದು ಎಂಬ ಪಾಪಿಚಿಂತನೆಯೇ ಬಿಜೆಪಿಯ ಹೊಲಸು ರಾಜಕಾರಣದ ಪರಾಕಾಷ್ಠೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.