ನವದೆಹಲಿ, ಮಾ 14 (DaijiworldNews/DB): ವಿಮಾನದಲ್ಲಿ ತೋರಿದ ಅಶಿಸ್ತು ಹಾಗೂ ಧೂಮಪಾನ ಮಾಡಿದ ಆರೋಪದ ಮೇಲೆ ದಂಡ ಪಾವತಿಸಲು ನಿರಾಕರಿಸಿದ ಆರೋಪಿಗೆ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.
ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಆತನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ ಆತ ಕೇವಲ 250 ರೂ. ದಂಡ ಪಾವತಿಸುವುದಾಗಿ ವಾದಿಸಿದ್ದ. ಹೀಗಾಗಿ ಆತನಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಮಾರ್ಚ್ 10ರಂದು ಏರ್ ಇಂಡಿಯಾ ವಿಮಾನದಲ್ಲಿ ಲಂಡನ್ನಿಂದ ಮುಂಬೈಗೆ ಆಗಮಿಸುತ್ತಿದ್ದ ವೇಳೆ ವಿಮಾನದ ಶೌಚಾಲಯಕ್ಕೆ ಹೋಗಿ ಈತ ಧೂಮಪಾನ ಮಾಡಿದ್ದ. ಇದನ್ನು ನೋಡಿದ ಸಿಬಂದಿ ತಡೆಯಲು ಹೋದಾಗ ಸಿಬಂದಿಯೊಂದಿಗೆ ಆತ ಗಲಾಟೆ ಎಬ್ಬಿಸಿದ್ದ. ಬಳಿಕ ಆತನ ಕೈಕಾಲು ಕಟ್ಟಿ ಕೂರಿಸಲಾಗಿತ್ತು. ಮುಂಬಯಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು. ಬಳಿಕ ಆತನನ್ನು ಪೊಲೀಸರು ಅಂಧೇರಿ ಮೆಟ್ರೋಪಾಲಿಟನ್ ಕೋರ್ಟ್ಗೆ ಹಾಜರುಪಡಿಸಿದ್ದರು.
25 ಸಾವಿರ ರೂಪಾಯಿ ದಂಡ ಕಟ್ಟುವಂತೆ ನ್ಯಾಯಾಲಯ ಹೇಳಿದಾಗ ನಾನು ಆನ್ಲೈನ್ ತಾಣಗಳಲ್ಲಿ ಹುಡುಕಿದ್ದು, ನನ್ನ ವಿರುದ್ಧ ದಾಖಲಾದ ಐಪಿಸಿ ಸೆಕ್ಷನ್ 330ರಡಿಯಲ್ಲಿ (ಇತರರ ಜೀವ ಮತ್ತು ಖಾಸಗಿ ಸುರಕ್ಷತೆಗೆ ಅಪಾಯವೊಡ್ಡಿದ ಆರೋಪ) ಜಾಮೀನು ಪಡೆಯುವ ದಂಡ ಕೇವಲ 250 ರೂಪಾಯಿಯಾಗಿದೆ. ಹೀಗಾಗಿ ಅದಕ್ಕಿಂತ ಹೆಚ್ಚು ಹಣ ಪಾವತಿಸಲಾರೆ ಎಂದು ವಾದಿಸಿದ್ದ. ಹೀಗಾಗಿ ಆತನನ್ನು ಜೈಲಿಗೆ ಕಳುಹಿಸಲಾಯಿತು ಎಂದು ವರದಿಯಾಗಿದೆ.