ತುಮಕೂರು, ಮಾ 14 (DaijiworldNews/HR): ಹಲವು ನಾಯಕರು, ಮಾಜಿ ಶಾಸಕರು, ಹಾಲಿ ಶಾಸಕರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದು, ಈ ಸಂದರ್ಭದಲ್ಲಿಯೇ ಅಮಾನತುಗೊಂಡಿರುವ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಅವರಿಗೆ ಪಕ್ಷಕ್ಕೆ ವಾಪಸ್ ಬನ್ನಿ ಎಂದು ಬಿಗ್ ಆಫರ್ ಅನ್ನು ಜೆಡಿಎಸ್ನ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ನೀಡಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಜೆಡಿಎಸ್ ಚಟುವಟಿಕೆಗಳಿಂದ ದೂರವಾಗಿದ್ದ ವಾಸಣ್ಣ (ಎಸ್. ಆರ್. ಶ್ರೀನಿವಾಸ್) ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಕಾರಣಕ್ಕೆ ಪಕ್ಷದಿಂದ ಅಮಾನತುಗೊಂಡಿದ್ದು, ಅಲ್ಲದೇ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದ್ದಾರೆ. ಇದೀಗ ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಎಸ್. ಆರ್. ಶ್ರೀನಿವಾಸ್ಗೆ ಪಕ್ಷಕ್ಕೆ ಮರಳಿ ಬನ್ನಿ ಎಂದು ಇಬ್ರಾಹಿಂ ಆಹ್ವಾನಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಇಬ್ರಾಹಿಂ, ಮಾಜಿ ಪ್ರಧಾನಿ ದೇವೇಗೌಡರು, ಎಚ್. ಡಿ. ಕುಮಾರಸ್ವಾಮಿ ಅವರಿಗೆ ಎಸ್. ಆರ್. ಶ್ರೀನಿವಾಸ್ ಮೇಲೆ ಗೌರವವಿದೆ. ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿಯೇ ಇದ್ದರು. ನಮಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಎಲ್ಲರಿಗೂ ಕೈ ಮುಗಿದು ಒಳಗೆ ಬಾ ಯಾತ್ರಿಕನೇ ಎಂದು ಆಹ್ವಾನ ನೀಡಿದರು.