ನವದೆಹಲಿ, ಮಾ 14 (DaijiworldNews/DB): ಲಂಡನ್ನಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿಚಾರವಾಗಿ ಕ್ಷಮೆ ಯಾಚಿಸಬೇಕೆಂದು ಬಜೆಟ್ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಕೂಡಾ ಬಿಜೆಪಿ ಸದಸ್ಯರು ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸಿದರು. ಆದರೆ ರಾಹುಲ್ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾತನಾಡಿ, ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ದ ಮಾತನಾಡುವುದನ್ನು ನೋಡಿ ಸುಮ್ಮನೆ ಇರುವುದು ಅಸಾಧ್ಯ. ಕೂಡಲೇ ರಾಹುಲ್ ಗಾಂಧಿಯವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ರಾಹುಲ್ ಹೇಳಿಕೆಯನ್ನು ಕೆಟ್ಟ ಸುಳ್ಳು ಎಂದು ಜರೆದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಅವರ ವಿರುದ್ದ ಲೋಕಸಭಾ ಸ್ಪೀಕರ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ಬಿಜೆಪಿ ಆಗ್ರಹಕ್ಕೆ ತಿರುಗೇಟು ನೀಡಿದ ಲೋಕಸಭೆಯ ಕಾಂಗ್ರೆಸ್ ಉಪನಾಯಕ ಮಾಣಿಕಂ ಠಾಗೋರ್, ರಾಹುಲ್ ಗಾಂಧಿಯವರು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಅವರು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಜನರ ಧ್ವನಿ ಹತ್ತಿಕ್ಕುವ ಪ್ರಯತ್ನದ ಬಗ್ಗೆ ಅವರು ಸರಿಯಾಗಿಯೇ ಮಾತನಾಡಿದ್ದಾರೆ ಎಂದು ಪ್ರತಿಪಾದಿಸಿದರು.
ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದದಿಂದಾಗಿ ಎರಡನೇ ದಿನವೂ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಮುಂಡೂಲ್ಪಟ್ಟವು.