ಔರಂಗಬಾದ್, ಮಾ 14 (DaijiworldNews/DB): ವಿದ್ಯಾರ್ಥಿನಿಯೊಬ್ಬಳು ಗಣಿತ ಪರೀಕ್ಷೆಗೆ ಗೈರು ಹಾಜರಾಗುವ ಮೂಲಕ ಬಾಲ್ಯವಿವಾಹ ಪ್ರಕರಣವೊಂದು ಬೆಳಕಿಗೆ ಬಂದ ಘಟನೆ ಔರಂಗಬಾದ್ನಲ್ಲಿ ನಡೆದಿದೆ.
ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ ಗಣಿತ ಪರೀಕ್ಷೆಗೆ ಸೋಮವಾರ ಬಾಲಕಿ ಗೈರಾಗಿದ್ದಳು. ಬಾಲಕಿ ಪರೀಕ್ಷೆಗೆ ಗೈರಾಗಿರುವ ಬಗ್ಗೆ ಅನುಮಾನಗೊಂಡ ಸಾಮಾಜಿಕ ಕಾರ್ಯಕರ್ತರೊಬ್ಬರು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ದೂರು ಆಧರಿಸಿ ಬಾಲಕಿ ಮನೆಗೆ ಗ್ರಾಮ ಸೇವಕರು ತೆರಳಿದಾಗ ಆಕೆಗೆ ಮದುವೆ ಮಾಡಿರುವ ವಿಚಾರ ಗೊತ್ತಾಗಿದೆ.
16 ವರ್ಷದ ಬಾಲಕಿಯನ್ನು 24 ವರ್ಷದ ಯುವಕನ ಜೊತೆ ಮದುವೆ ಮಾಡಿಸಲಾಗಿತ್ತು. ಇದೀಗ ಮದುವೆಗೆ ಕಾರಣರಾದ 13 ಮಂದಿ ಮತ್ತು ಮದುವೆಗೆ ಹಾಜರಾದ ಸುಮಾರು 200 ಮಂದಿ ಅತಿಥಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ಬಾಲ್ಯವಿವಾಹ ತಡೆ ಕಾಯ್ದೆ- 1929 ಅಡಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.