ಶಿವಮೊಗ್ಗ, ಮಾ 14 (DaijiworldNews/DB): ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಕರ್ನಾಟಕದ 40 ಪರ್ಸೆಂಟ್ ಸರ್ಕಾರದ ಸದ್ದೇ ಕೇಳುತ್ತಿದೆ. ಸಣ್ಣ ಮಗುವೂ ಪೇಸಿಎಂ ಎಂಬುದಾಗಿ ಬೊಮ್ಮಾಯಿಯವರನ್ನು ಸಂಬೋಧಿಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೆವಾಲ ವ್ಯಂಗ್ಯವಾಡಿದ್ದಾರೆ.
ಗಾಡಿಕೊಪ್ಪದ ಲಗಾನ್ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ಗ್ಯಾರೆಂಟಿ ಕಾರ್ಡ್ ವಿತರಣೆ ಮತ್ತು ಜಿಲ್ಲಾಮಟ್ಟದ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ರಾಜ್ಯ ಬಿಜೆಪಿಯ ಭ್ರಷ್ಟಾಚಾರದ ಅರಿವಾಗಿದೆ. ಎಲ್ಲೆಲ್ಲೂ 40 ಪರ್ಸೆಂಟ್ ಸರ್ಕಾರದ ಬಗ್ಗೆಯೇ ಜನ ಮಾತನಾಡುತ್ತಿದ್ದಾರೆ ಎಂದರು.
ಆರು ತಿಂಗಳ ಹಿಂದೆಯೇ 40 ಪರ್ಸೆಂಟ್ ವಿಚಾರವಾಗಿ ಗುತ್ತಿಗೆದಾರರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಆದರೆ ರಾಜ್ಯಕ್ಕೆ ಎಂಟು ಬಾರಿ ಬಂದು ಹೋಗಿರುವ ಪ್ರಧಾನಿ ಮೋದಿ ಈವರೆಗೂ ಈ ವಿಚಾರವಾಗಿ ಮಾತನಾಡಿಲ್ಲ. ಬೆಳಗಾವಿಯಲ್ಲಿ ರೋಡ್ಶೋ ಮಾಡಿದ ಪ್ರಧಾನಿ ಮೋದಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಹೋಗಿ ಸಾಂತ್ವನವನ್ನೂ ಹೇಳಿಲ್ಲ ಎಂದು ಕಿಡಿ ಕಾರಿದರು.
ಬಿಜೆಪಿ ನಾಗರ ಹಾವಿದ್ದಂತೆ. ಅವರದೇ ಪಕ್ಷದ ಕಾರ್ಯಕರ್ತ ಕಮಿಷನ್ ಭೂತಕ್ಕೆ ಬಲಿಯಾದಾಗ ಅವರ ಕುಟುಂಬಕ್ಕೆ ರಕ್ಷಣೆ ನೀಡದವರು ರಾಜ್ಯದ ಜನರನ್ನು ರಕ್ಷಿಸುವುದು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಮಠಗಳಿಗೆ ನೀಡುವ ಅನುದಾನದಲ್ಲೂ ಕಮಿಷನ್ ಕೇಳುವ ಪ್ರವೃತ್ತಿ ಬಿಜೆಪಿಯವರದ್ದು ಎಂದು ದೂಷಿಸಿದರು.