ನವದೆಹಲಿ, ಮಾ 15 (DaijiworldNews/DB): ತಾಯಿಯ ಗರ್ಭದಲ್ಲಿರುವ ಭ್ರೂಣಕ್ಕೆ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಏಮ್ಸ್ ವೈದ್ಯರು ವೈದ್ಯಕೀಯ ಜಗತ್ತಿನಲ್ಲೇ ಅಚ್ಚರಿಯ ಸಾಧನೆಯನ್ನು ಮಾಡಿದ್ದಾರೆ.
ಮೂರು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದ 28 ವರ್ಷದ ಮಹಿಳೆಯೊಬ್ಬರು ಏಮ್ಸ್ಗೆ ದಾಖಲಾಗಿದ್ದರು. ಮಹಿಳೆ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಮಗುವಿನ ಆರೋಗ್ಯವನ್ನು ಪರೀಕ್ಷಿಸಿದ ವೇಳೆ ಮಗುವಿನ ಹೃದಯದಲ್ಲಿ ಸಮಸ್ಯೆ ಇರುವುದು ವೈದ್ಯರಿಗೆ ಗೊತ್ತಾಗಿತ್ತು. ಈ ವಿಚಾರವನ್ನು ದಂಪತಿಗೆ ತಿಳಿಸಿದಾಗ ಶಸ್ತ್ರಚಿಕಿತ್ಸೆ ಮುಖಾಂತರ ಸಮಸ್ಯೆ ಸರಿಪಡಿಸಲು ದಂಪತಿ ಒಪ್ಪಿಗೆ ನೀಡಿದ್ದರು.
ದಂಪತಿಯ ಒಪ್ಪಿಗೆ ದೊರೆತ ಬಳಿಕ ದ್ರಾಕ್ಷಿ ಗಾತ್ರದಲ್ಲಿದ್ದ ಭ್ರೂಣದ ಹೃದಯದ ಶಸ್ತ್ರಚಿಕಿತ್ಸೆಯನ್ನು ಏಮ್ಸ್ನ ಕಾರ್ಡಿಯೋಥೊರಾಸಿಕ್ ಸೈನ್ಸಸ್ ಸೆಂಟರ್ನ ತಜ್ಞರ ತಂಡವು ಯಶಸ್ವಿಯಾಗಿ ಮಾಡಿದೆ. ಸದ್ಯ ಭ್ರೂಣದ ಆರೋಗ್ಯ ಸ್ಥಿರವಾಗಿದ್ದು, ತಾಯಿಯ ಆರೋಗ್ಯದ ಮೇಲೆ ವೈದ್ಯರ ತಂಡ ನಿಗಾ ವಹಿಸಿದೆ ಎಂದು ತಿಳಿದು ಬಂದಿದೆ.
ಶಸ್ತ್ರಚಿಕಿತ್ಸೆ ಹೇಗಾಯಿತು?
ಭ್ರೂಣದ ಹೃದಯದ ಶಸ್ತ್ರಚಿಕಿತ್ಸೆಯನ್ನು ಅಲ್ಟ್ರಾಸೌಂಡ್ ತಂತ್ರಜ್ಞಾನದ ಮೂಲಕ ಮಾಡಲಾಗಿದೆ. ತಾಯಿಯ ಹೊಟ್ಟೆಯ ಮೂಲಕ ಮಗುವಿನ ಹೃದಯಕ್ಕೆ ಸೂಜಿ ಚುಚ್ಚಲಾಗಿದೆ. ಬಳಿಕ ರಕ್ತಪರಿಚಲನೆಗೆ ಅಡ್ಡಿಯಾಗಿದ್ದ ಕವಾಟವನ್ನು ಬಲೂನ್ ಕ್ಯಾತಿಟರ್ ಮೂಲಕ ತೆರೆಯಲಾಗಿದೆ. ಇನ್ನು ಭ್ರೂಣ ಸರಿಯಾದ ರೀತಿಯಲ್ಲಿ ಅಭಿವೃದ್ದಿಗೊಳ್ಳಲಿದೆ. ಅಲ್ಲದೆ ಪ್ರಸವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದು ಎಂದು ಭಾವಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.