ಹುಬ್ಬಳ್ಳಿ, ಮಾ 15 (DaijiworldNews/DB): ಮಾಜಿ ಸಚಿವ ಆರ್. ಶಂಕರ್ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿ ಹಿಂದೆ ಬಿಜೆಪಿ ಪಾತ್ರವಿಲ್ಲ. ಇದು ಬಿಜೆಪಿ ಪ್ರೇರಿತ ದಾಳಿ ಎಂಬುದು ಶುದ್ದ ಸುಳ್ಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತಪ್ಪು ಮಾಡಿದವರು ಯಾರೇ ಆದರೂ ಅವರಿಗೆ ಶಿಕ್ಷೆ ಆಗಬೇಕು. ಆ ಕೆಲಸವನ್ನು ಸರ್ಕಾರ ಮಾಡುತ್ತಿದೆ. ತನಿಖಾ ಸಂಸ್ಥೆಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ. ಶಂಕರ್ ನಿವಾಸದ ಮೇಲಿನ ಐಟಿ ದಾಳಿಯಲ್ಲಿಯೂ ತನಿಖಾ ಸಂಸ್ಥೆಗಳು ಅವರದೇ ಆದ ಕೆಲಸ ಮಾಡಿವೆ ಎಂದರು.
ಬಿಜೆಪಿ ಪ್ರೇರಿತವಾಗಿ ಐಟಿ ಅಧಿಕಾರಿಗಳು ಶಂಕರ್ ನಿವಾಸದ ಮೇಲೆ ದಾಳಿ ಮಾಡಿಲ್ಲ. ಅಂತಹ ಸುಳ್ಳು ಸುದ್ದಿಗಳನ್ನು ವೃಥಾ ಹರಡಲಾಗುತ್ತಿದೆ ಎಂದವರು ಸ್ಪಷ್ಟಪಡಿಸಿದರು.
ಸಿ.ಟಿ. ರವಿ ಹಾಗೂ ಬಿ.ವೈ. ವಿಜಯೇಂದ್ರ ನಡುವಿನ ಮಾತಿನ ಸಮರ ಮಾಧ್ಯಮಗಳ ಸೃಷ್ಟಿಯೇ ಹೊರತು ಅವರ ಮಧ್ಯೆ ಅಂತಹ ಯಾವುದೇ ಮಾತು ಬೆಳೆದಿಲ್ಲ. ಸಚಿವ ಸೋಮಣ್ಣ ದೆಹಲಿಗೆ ಹೋಗುತ್ತಿರುವ ವಿಚಾರ ತಿಳಿದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.