ಬೆಂಗಳೂರು, ಮಾ 15 (DaijiworldNews/MS): ಉತ್ಸವ ಮೂರ್ತಿಯಾಗಿದ್ದ ಯಡಿಯೂರಪ್ಪನವರು, ವಿಸರ್ಜನಾ ಮೂರ್ತಿಯಾದರೇ? ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಟಿಕೆಟ್ ಯಾರಿಗೆ ನೀಡಬೇಕು ಎಂದು ನಿರ್ಧಾರ ಮಾಡುವುದು ಪಕ್ಷವೇ ಹೊರೆತು ಯಡಿಯೂರಪ್ಪನವರು ಅಲ್ಲ ಎನ್ನುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಹೇಳಿಕೆ ಕುರಿತು ಕಾಂಗ್ರೆಸ್ ಈ ರೀತಿಯಾಗಿ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಯಡಿಯೂರಪ್ಪನವರ ಸ್ಥಾನ ಮತ್ತು ಮಾನ ಎರಡನ್ನೂ ಕಾಲ ಕೆಳಗಿನ ಕಸದಂತೆ ಕಾಣುತ್ತಿದೆ ಬಿಜೆಪಿ. ಟಿಕೆಟ್ ನಿರ್ಧರಿಸುವ ಹಕ್ಕು, ಸ್ವತಂತ್ರ ಯಡಿಯೂರಪ್ಪ ಅವರಿಗಿಲ್ಲ ಎನ್ನುವ ಮೂಲಕ ಬಿಎಸ್ವೈ ಮುಕ್ತ ಬಿಜೆಪಿ ಅಭಿಯಾನವನ್ನ ಅಧಿಕೃತಗೊಳಿಸಿದ್ದಾರೆ ಸಿ.ಟಿ ರವಿ. ಲಿಂಗಾಯತರ ಮತಕ್ಕಾಗಿ ಉತ್ಸವ ಮೂರ್ತಿಯಾಗಿದ್ದ ಬಿಎಸ್ವೈ ಇಷ್ಟು ಬೇಗ ವಿಸರ್ಜನಾ ಮೂರ್ತಿಯಾದರೆ?‘ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.