ನವದೆಹಲಿ, ಮಾ 15 (DaijiworldNews/DB): ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣ ಸಂಬಂಧಿಸಿದಂತೆ ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ಪತ್ನಿ ರಾಬ್ರಿ ದೇವಿ ಹಾಗು ಪುತ್ರಿ ಮಿಸಾ ಭಾರ್ತಿ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.
ವಿಶೇಷ ನ್ಯಾಯಾಧೀಶರಾದ ಗೀತಾಂಜಲಿ ಗೋಯೆಲ್ ಅವರು 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಶ್ಯೂರಿಟಿ ಮೇಲೆ ಜಾಮೀನು ನೀಡಿ ಆದೇಶಿಸಿದರು. 2004 ಮತ್ತು 2009 ರ ನಡುವೆ ಲಾಲೂ ರೈಲ್ವೇ ಸಚಿವರಾಗಿದ್ದ ವೇಳೆ ಅವರ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ ಅಥವಾ ಮಾರಾಟ ಮಾಡಿದ ಜಮೀನುಗಳಿಗೆ ಪ್ರತಿಯಾಗಿ ರೈಲ್ವೇಯಲ್ಲಿ ನೇಮಕಾತಿ ನಡೆದಿದೆ ಎಂಬ ಆರೋಪ ಅವರ ಮೇಲಿತ್ತು.
ರೈಲ್ವೇಯಲ್ಲಿ ಅನಿಯಮಿತ ನೇಮಕಾತಿ ಮಾಡಲಾಗಿದ್ದು, ಭಾರತೀಯ ರೈಲ್ವೇ ನಿಯಮ ಉಲ್ಲಂಘನೆಯಾಗಿದೆ ಎಂದು ಸಿಬಿಐ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿತ್ತು. ಅಲ್ಲದೆ ಕೆಲಸ ಪಡೆಯುವ ಉದ್ದೇಶದಿಂದ ಚಾಲ್ತಿಯಲ್ಲಿರುವ ಮಾರಕಟ್ಟೆ ದರದ ಐದನೇ ಒಂದು ಭಾಗದವರೆಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಕುಟುಂಬಿಕರು ಲಾಲೂ ಕುಟುಂಬದವರಿಗೆ ಭೂಮಿ ಮಾರಾಟ ಮಾಡಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು.