ನವದೆಹಲಿ, ಮಾ 15 (DaijiworldNews/DB): ಭಾರತದ ಪ್ರಜಾಪ್ರಭುತ್ವ ದಾಳಿಗೆ ಒಳಗಾಗಿದೆ ಎಂಬ ಬ್ರಿಟನ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಸಂಬಂಧಿಸಿ ರಾಹುಲ್ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಇಂದೂ ಪ್ರತಿಭಟನೆ ನಡೆಸಿದ ಪರಿಣಾಮ ಲೋಕಸಭಾ ಕಲಾಪವನ್ನು ಬುಧವಾರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಸದನ ಆರಂಭವಾಗುತ್ತಿದ್ದಂತೆ ವಿಪಕ್ಷಗಳ ಸದಸ್ಯರು ಕೈಯಲ್ಲಿ ಫಲಕ ಹಿಡಿದುಕೊಂಡು ಅದಾನಿ ಗ್ರೂಪ್ನ ಆಪಾದಿತ ಸ್ಟಾಕ್ ಮ್ಯಾನಿಪ್ಯುಲೇಶನ್ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ಮಾಡಬೇಕೆಂದು ಒತ್ತಾಯಿಸಿ ಸದನದ ಮುಂಭಾಗದ ಪೀಠಗಳೆದುರು ಆಗಮಿಸಿದರು.
ಇನ್ನು ಇದೇ ವೇಳೆ ಬಿಜೆಪಿ ಸದಸ್ಯರು ರಾಹುಲ್ ಗಾಂಧಿಯವರು ಬ್ರಿಟನ್ನಲ್ಲಿ ಭಾರತದ ಆಡಳಿತ ಪಕ್ಷದ ವಿರುದ್ದ ಮಾತನಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿದರು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಗಲಾಟೆಯಿಂದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕಲಾಪಕ್ಕೆ ಅವಕಾಶ ಕಲ್ಪಿಸುವಂತೆ ಎಲ್ಲಾ ಸದಸ್ಯರಿಗೆ ಮನವಿ ಮಾಡಿದರು. ಆದರೆ ಸದಸ್ಯರು ಪಟ್ಟು ಬಿಡದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.