ನವದೆಹಲಿ, ಮಾ 15 (DaijiworldNews/MS): ಇಂಗ್ಲೆಂಡಿನಲ್ಲಿ ಸಾರ್ವಜನಿಕ ಭಾಷಣ ಮಾಡುವಾಗ ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವದ ಕುರಿತಂತೆ ನೀಡಿರುವ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ವಿಷಯ ಮಂಡನೆ ಮಾಡುವಾಗ ಜನರು ತಮ್ಮ ಅಭಿಪ್ರಾಯ ಹೇಳುವುದು ಸಾಮಾನ್ಯ. ರಾಹುಲ್ ಗಾಂಧಿಯವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿರುವವರಲ್ಲಿ ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಮೋದಿಯವರು ಐದಾರು ದೇಶಗಳಿಗೆ ಭೇಟಿ ನೀಡಿ, ಅಲ್ಲಿ ನಮ್ಮ ದೇಶದ ಜನರನ್ನು ಅವಮಾನಿಸಿದ ಮತ್ತು ಭಾರತದಲ್ಲಿ ಹುಟ್ಟಿದ್ದು ಪಾಪ ಎಂದು ನೀಡಿರುವ ಹೇಳಿಕೆ ಬಗ್ಗೆ ನೀವು ಉತ್ತರಿಸಬೇಕು. ಅವರು ಮಾಡಿದ್ದು ಅಪಮಾನವಲ್ಲವೇ, ಅವರೇಕೆ ಕ್ಷಮೆ ಕೇಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರ ಮಾತುಗಳನ್ನು ಆಕ್ಷೇಪಿಸುವ ಮೂಲಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಸತ್ಯ ಮಾತನಾಡುವವರನ್ನು ಜೈಲಿಗೆ ಕಳುಹಿಸಲಾಗುತ್ತದೆ, ಟಿವಿ ಚಾನೆಲ್ಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಹಾಗೂ ಸತ್ಯವನ್ನು ಮಾತನಾಡುವ ಜನರನ್ನು ಜೈಲಿಗೆ ಹಾಕಲಾಗುತ್ತಿದೆ, ಇದು ಪ್ರಜಾಪ್ರಭುತ್ವ ಮಾರಕವಲ್ಲವೇ ಎಂದು ಕೇಳಿದ್ದಾರೆ.