ಬೆಂಗಳೂರು, ಮಾ 16(DaijiworldNews/MS): ಎಲ್ಲರೂ ಪಕ್ಷಕ್ಕಾಗಿ ಕೆಲಸ ಮಾಡಬೇಕು, ಅಸಮಾಧಾನದಿಂದ ವರ್ತಿಸಿದರೆ ಅದು ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಸಚಿವ ವಿ ಸೋಮಣ್ಣನವರಿಗೆ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರ ಮೇಲೆ ಅಸಮಾಧಾನವಿದೆ ಎಂಬ ವದಂತಿ ವಿಚಾರವಾಗಿ ಮಾದ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಪಕ್ಷದೊಳಗೆ ನಾಯಕರು ಭಿನ್ನಮತ, ಅಸಮಾಧಾನ ಹೇಳಿಕೆ ನೀಡಿದರೆ ಪಕ್ಷಕ್ಕೆ ಒಳ್ಳೆಯದಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ, ವಿಜಯೇಂದ್ರ ಕೂಡ ಕೆಲಸ ಮಾಡ್ತಿದ್ದಾರೆ, ಸೋಮಣ್ಣ ಕೂಡ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಭಿನ್ನಮತ, ಅಸಮಾಧಾನ ಇದ್ದರೆ ಅದನ್ನು ಶಮನಗೊಳಿಸುವ ಪ್ರಯತ್ನವನ್ನು ಹಿರಿಯ ನಾಯಕರು ಮಾಡುತ್ತಿರುತ್ತಾರೆ. ವರಿಷ್ಠರು ಸೋಮಣ್ಣನವರನ್ನು ಕರೆದು ಮಾತನಾಡಿದ್ದಾರೆ, ಎಲ್ಲವೂ ಸರಿಹೋಗುತ್ತದೆ,ಯಾವುದೇ ರೀತಿಯಲ್ಲಿ ಗೊಂದಲವಿಲ್ಲ. ಯಾರು ಯಾರನ್ನೂ ಕಡೆಗಣನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.