ನವದೆಹಲಿ, ಮಾ 17 (DaijiworldNews/DB): ಕಾರಿನ ಮೇಲೆ ನಿಂತು ಹುಟ್ಟುಹಬ್ಬ ಆಚರಿಸಿದ ಯೂಟ್ಯೂಬರ್ವೊಬ್ಬರನ್ನು ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಪ್ರಿನ್ಸ್ ದೀಕ್ಷಿತ್ ಬಂಧಿತ ಯುಟ್ಯೂಬರ್. ಕಳೆದ ನವೆಂಬರ್ 16ರಂದು ಈತ ಚಲಿಸುವ ಕಾರಿನ ಮೇಲೆ ನಿಂತುಕೊಂಡು ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಂಚಾರ ನಿಯಮ ಉಲ್ಲಂಘಿಸಿ ಗೂಂಡಾಗಿರಿ ಪ್ರದರ್ಶಿಸಿದ ಆರೋಪದ ಹಿನ್ನೆಲೆಯಲ್ಲಿ ಆತನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆತನ ಸ್ನೇಹಿತರಿಗಾಗಿ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.