ನವದೆಹಲಿ, ಮಾ 17 (DaijiworldNews/DB): ಪ್ಲಾಸ್ಟಿಕ್ನಿಂದಾಗುವ ಹಾನಿಯ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವ್ಯಕ್ತಿಯೊಬ್ಬರು ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ಬಾಂಗ್ಲಾದೇಶದತ್ತ ಸೈಕಲ್ನಲ್ಲೇ ಪ್ರಯಾಣ ಬೆಳೆಸಿದ್ದಾರೆ.
ಭೂಮಿಯಲ್ಲಿರುವ ಸಕಲ ಜೀವರಾಶಿಗಳಿಗೂ ಮಾರಕವಾಗಿರುವ ಪ್ಲಾಸ್ಟಿಕ್ ಉತ್ಪನ್ನಗಳಿಂದಾಗಿ ಹಲವು ಜೀವಿಗಳು ನಶಿಸಿ ಹೋಗುತ್ತಿದೆ. ಮನುಷ್ಯನ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದೇ ಕಾರಣಕ್ಕಾಗಿ ಅನಿಲ್ ಚೌಹಾಣ್ ಅವರು ಜಾಗೃತಿ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಏಳು ವರ್ಷದ ಶ್ರೇಯಾ ಹಾಗೂ ನಾಲ್ಕು ವರ್ಷದ ಯುಕ್ತಾ ಎಂಬ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಸೈಕಲ್ನಲ್ಲಿ ಕೂರಿಸಿಕೊಂಡು ದಮನ್, ದಿಯು ಮಾರ್ಗದ ಮೂಲಕ ಬಾಂಗ್ಲಾದೇಶದ ಕಡೆ ಪ್ರಯಾಣ ಬೆಳೆಸಿದ್ದಾರೆ. ಏಕ ಬಳಕೆಯ ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮದ ಬಗ್ಗೆ ಜನರಿಗೆ ಮನವರಿಕೆ ಮಾಡುವುದು ಅವರ ಉದ್ದೇಶವಾಗಿದೆ.
2022ರ ಜನವರಿ 1ರಂದು ಅನಿಲ್ ಚೌಹಾಣ್ ಯಾತ್ರೆ ಆರಂಭಿಸಿದ್ದು, ಗೋವಾ, ಗುಜರಾತ್, ರಾಜಸ್ತಾನ್, ದೆಹಲಿ ಮತ್ತು ಮತ್ತು ಮಧ್ಯಪ್ರದೇಶದ ಮೂಲಕ ಪ್ರಸ್ತುತ ಉತ್ತರಪ್ರದೇಶದ ಲಖನೌ ತಲುಪಿದ್ದಾರೆ. ಈಗಾಗಲೇ 11ಸಾವಿರಕ್ಕೂ ಹೆಚ್ಚು ದೂರ ಕ್ರಮಿಸಿದ್ದಾರೆ. ಪತ್ನಿ ಮೃತಪಟ್ಟಿರುವುದರಿಂದ ಮಕ್ಕಳನ್ನು ಜೊತೆಗೇ ಕರೆದೊಯ್ದಿದ್ದಾರೆ.