ಧಾರವಾಡ, ಮಾ 17 (DaijiworldNews/DB): ಕೆಲವರಿಗೆ ಮತವೇ ಮೊದಲಾದರೆ ನಮಗೆ ರಾಷ್ಟ್ರ ಮೊದಲು. ಅಭಿವೃದ್ದಿಯಲ್ಲೂ ನಾವೇ ಮೊದಲು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಕುಂದಗೋಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಯಾವತ್ತೋ ಸಾಲ ಮನ್ನಾ ಮಾಡಿದನ್ನು ಈಗಲೂ ಹೇಳುತ್ತಿದ್ದಾರೆ. ಆದರೆ ನಾವು ಸರ್ಕಾರದ ಅಭಿವೃದ್ದಿಯ ರಿಪೋರ್ಟ್ ಕಾರ್ಡ್ನ್ನು ಜನರ ಮುಂದಿಟ್ಟಿದ್ದೇವೆ. ರಾಷ್ಟ್ರ ಮೊದಲು ಎಂಬುದು ನಮ್ಮ ನಿಲುವು ಎಂದರು.
ನಾವು ಮೀಸಲಾತಿ ವಿರೋಧಿಗಳು ಎಂಬುದಾಗಿ ನಮ್ಮನ್ನು ಕೆಲವರು ಹೀಯಾಳಿಸುತ್ತಿದ್ದರು. ಆದರೆ ವಾಸ್ತವವಾಗಿ ನಾವು ಮೀಸಲಾತಿ ವಿರೋಧಿಗಳಲ್ಲ. ಮತವೇ ಮೊದಲು ಎಂಬ ಚಿಂತನೆ ಹೊಂದಿದವರು ಕುಕ್ಕರ್ ಬಾಂಬ್ ಸ್ಪೋಟದಿಂದ ಎಷ್ಟು ಮತ ಬರಬಹುದು ಎಂಬುದನ್ನು ಲೆಕ್ಕಾಚಾರ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ಕುಟುಕಿದರು.
ಲಜ್ಜೆ ಬಿಟ್ಟು ಸುಳ್ಳು ಹೇಳುವುದು ಸಿದ್ದರಾಮಯ್ಯನವರಿಗೆ ಸಾಮಾನ್ಯವಾಗಿದೆ. ಸಾರ್ವಜನಿಕವಾಗಿಯೇ ಅವರು ಇಷ್ಟೊಂದು ಸುಳ್ಳು ಹೇಳುತ್ತಾರೆಂದಾದರೆ ಮತದಾರರು ಈ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದರು.
ಕೊಟ್ಟ ಮಾತನ್ನು ಉಳಿಸಿಕೊಂಡ ಸರ್ಕಾರ ನಮ್ಮದು. ಎಲ್ಲೋ ನಾಲ್ಕು ದಿನ ಹೆಚ್ಚು ಕಡಿಮೆಯಾಗಿರಬಹುದೇ ಹೊರತು ಕೊಟ್ಟ ಮಾತಿನಂತೆ ಅಭಿವೃದ್ದಿ ಮಾಡುವುದಕ್ಕೆ ಯಾವತ್ತೂ ನಾವು ಹಿಂದೆ ಬಿದ್ದಿಲ್ಲ ಎಂದರು.