ಜಮ್ಮು, ಮಾ 17(DaijiworldNews/MS): ಉದ್ಯೋಗಂ ಪುರುಷ ಲಕ್ಷಣಂ ಅನ್ನೋ ಹಳೆಯ ಗಾದೆ ಮಾತು ಈಗ ಅಕ್ಷರಶಃ ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಭಯೋತ್ಪಾದಕ ದಾಳಿಯಿಂದ ಸುದ್ದಿಯಾಗುತ್ತಿರುವ ಜಮ್ಮುವಿನಲ್ಲಿ ಮಹಿಳೆಯೊಬ್ಬರು ಮೊದಲ ಬಾರಿಗೆ ಆಟೋ ಸಾರಥಿಯಾಗಿ ರಸ್ತೆಗಿಳಿದು ಕಾಯಕ ಮಾಡುತ್ತಿದ್ದಾರೆ.
ಜಮ್ಮು ಜಿಲ್ಲೆಯ ಕುಂಜ್ವಾನಿ ನಿವಾಸಿಯಾಗಿರುವ ರಂಜೀತ್ ಕೌರ್, ಜಮ್ಮು ಮತ್ತು ಕಾಶ್ಮೀರ ಗ್ರಾಮೀಣ ಜೀವನೋಪಾಯ ಮಿಷನ್ (JKRLM) ನ UMEED ಯೋಜನೆ ಬೆಂಬಲದೊಂದಿಗೆ ರಂಜೀತ್ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ನನ್ನನ್ನು ಟೀಕಿಸುತ್ತಿದ್ದವರು ಆಟೋ ಚಾಲಕಿಯಾದ ಬಳಿಕ ಗೌರವಾನ್ವಿತ ವ್ಯಕ್ತಿಯಂತೆ ಕಾಣುತ್ತಿದ್ದಾರೆ ಎನ್ನುತ್ತಾರೆ ರಂಜೀತ್.
ದಿನನಿತ್ಯದ ನಾನು 1500 ರಿಂದ 2000 ರೂಪಾಯಿಗಳವರೆಗೆ ಗಳಿಸುತ್ತಿದ್ದು, ಇದರೊಂದಿಗೆ ನಾನು ವಿಶೇಷ ಬುಕಿಂಗ್ಗಳನ್ನು ಕೂಡಾ ಪಡೆಯುತ್ತಿದ್ದೇನೆ. ಪ್ರಯಾಣಿಕರು ನನ್ನ ಧೈರ್ಯದಿಂದ ಪ್ರಭಾವಿತರಾಗಿದ್ದಾರೆ. ಈ ಹಿಂದೆ ನನ್ನ ಕುಟುಂಬಕ್ಕೆ ನನ್ನಿಂದ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ನೋವು ಕಾಡುತ್ತಿತ್ತು. ಹೀಗಾಗಿ ಪತಿಗೆ ಭುಜಕ್ಕೆ ಭುಜ ಕೊಡಲು ನಿರ್ಧರಿಸಿ ಆಟೋರಿಕ್ಷಾ ಚಾಲಕಿಯಾಗಿ ಕೆಲಸ ಮಾಡಲು ನಿರ್ಧರಿಸಿದೆ. ಆದರೆ ಆರಂಭಿಕ ಹಂತದಲ್ಲಿ ನನ್ನ ಪತಿಯನ್ನು ಮನವೊಲಿಸುವುದು ಕಷ್ಟಕರವಾಗಿತ್ತು. ಹೇಗೋ ಒಪ್ಪಿಸಿದ ನಂತರ, ನನ್ನ ಸಮಯವನ್ನು ವ್ಯರ್ಥ ಮಾಡದೆ UMEED ಗುಂಪಿಗೆ ಸೇರಿಕೊಂಡೆ, ಅಲ್ಲಿಂದ ನಾನು ಇ-ರಿಕ್ಷಾಗೆ ಹಣಕಾಸಿನ ಸಹಾಯವನ್ನು ಪಡೆದುಕೊಂಡೆ ಎನ್ನುತ್ತಾರೆ ಕೌರ್.
ಹಣಕ್ಕಾಗಿ ಹೆಣ್ಣೊಬ್ಬಳು ತನ್ನ ತಂದೆ ಅಥವಾ ಗಂಡನ ಮೇಲೆ ಅವಲಂಬಿತರಾಗಬಾರದು. ನಮ್ಮ ಕನಸುಗಳನ್ನು ನನಸಾಗಿಸಲು ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ಹೆಣ್ಣುಮಕ್ಕಳು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಬೆಂಬಲಿಸಲು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಬಹುದು ನನಗೆ ಜೀವನೋಪಾಯಕ್ಕೆ ಸಹಾಯ ಮಾಡಿದ ಕೇಂದ್ರದ ಯೋಜನೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳುತ್ತಾರೆ ಕೌರ್.