ನವದೆಹಲಿ, ಮಾ 17 (DaijiworldNews/DB): ಮಾಂಸ ಮಾರಾಟಗಾರರಿಬ್ಬರ ಮೇಲೆ ಪೊಲೀಸ್ ಸಿಬಂದಿ ಸಹಿತ ಏಳು ಮಂದಿ ಹಲ್ಲೆ ನಡೆಸಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ದೆಹಲಿಯ ಶಾಹದಾರದಲ್ಲಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಕಸಾಯಿಖಾನೆಗೆ ಮಾಂಸ ಸರಬರಾಜು ಮಾಡುವ ನವಾಬ್ ತನ್ನ ಸೋದರ ಸಂಬಂಧಿ ಮುಸ್ತಾಫನೊಂದಿಗೆ ಮಾರ್ಚ್ 7ರಂದು ಆನಂದ್ ವಿಹಾರ್ ಪ್ರದೇಶದಲ್ಲಿ ಕಾರಿನಲ್ಲಿ ತನ್ನ ಮನೆಗೆ ಮಾಂಸ ಕೊಂಡೊಯುತ್ತಿದ್ದ ವೇಳೆ ಕಾರು ಸ್ಕೂಟಿಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಸ್ಥಳದಲ್ಲಿ ವಿವಾದ ಶುರುವಾಗಿದ್ದು, ಪೊಲೀಸ್ ಸಿಬಂದಿ ಸಹಿತ ಏಳು ಮಂದಿ ಗೋರಕ್ಷಕರು ಎಂದು ಹೇಳಿಕೊಂಡು ಮಾಂಸ ಮಾರಾಟಗಾರರ ಮೇಲೆ ಹಲ್ಲೆ ನಡೆಸಿ ಬಳಿಕ ಅವರ ಮುಖದ ಮೇಲೆ ಮೂತ್ರ ವಿಜರ್ಸಿಸಿದ್ದಾರೆ. ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದ್ದು, ಉಳಿದ ನಾಲ್ವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಗಲಾಟೆ ನಡೆದ ವೇಳೆ ಪಿಸಿಆರ್ ಆಗಮಿಸಿ 2500 ರೂ.ಗಳನ್ನು ತೆಗೆದುಕೊಂಡು ಸ್ಕೂಟರ್ ಚಾಲಕನಿಗೆ ನೀಡಿದ್ದಾನೆ. ಬಳಿಕ ಪೊಲೀಸರು 15 ಸಾವಿರ ರೂ.ಗಳಿಗೆ ನಮ್ಮಲ್ಲಿ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಸಿದ್ದರು. ಆ ಬಳಿಕ ಪೊಲೀಸರು ಇತರ ನಾಲ್ವರನ್ನು ಕರೆಸಿ ನಮ್ಮನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದರು. ಅಲ್ಲಿ ನಮಗೆ ಥಳಿಸಿ ಬಳಿಕ ನಮ್ಮ ಮುಖದ ಮೇಲೆ ಮೂತ್ರ ವಿಸರ್ಜಿಸಿ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.