ನವದೆಹಲಿ, ಮಾ 17 (DaijiworldNews/DB): ದೆಹಲಿ ಮದ್ಯ ನೀತಿ ಅಕ್ರಮ ಪ್ರಕರಣ ವಿಚಾರವಾಗಿ ಬಂಧಿಸಲ್ಪಟ್ಟಿದ್ದ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಇಡಿ ಕಸ್ಟಡಿಯನ್ನು ಮತ್ತೆ ಐದು ದಿನಗಳ ಕಾಲ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಸಿಸೋಡಿಯಾ ಅವರ ಏಳು ದಿನಗಳ ಇಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇನ್ನೂ ವಿಚಾರಣೆ ನಡೆಸಲು ಬಾಕಿ ಇರುವುದರಿಂದ ಏಳು ದಿನ ಕಸ್ಟಡಿಯನ್ನು ಏಜೆನ್ಸಿ ಕೋರಿತ್ತು. ಸಿಸೋಡಿಯಾ ಪರ ಇಡಿ ವಕೀಲ ಜೊಹೆಬ್ ಹುಸೇನ್ ಮತ್ತು ಹಿರಿಯ ವಕೀಲರಾದ ಮೋಹಿತ್ ಮಾಥುರ್ ಮತ್ತು ಸಿದ್ಧಾರ್ಥ್ ಅಗರ್ವಾಲ್ ಅವರ ವಾದ ಆಲಿಸಿದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್ ಅವರು ಈ ಆದೇಶ ನೀಡಿದರು.
2021-22ರ ಮದ್ಯ ನೀತಿ ಸಂಬಂಧಿಸಿ ದಾಖಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಇಡಿ ಬಂಧಿಸಿತ್ತು.