ಧಾರವಾಡ,ಮಾ 20(MSP): ಧಾರವಾಡದ ಹೊಸ ಬಸ್ ನಿಲ್ದಾಣ ಬಳಿ ಮಂಗಳವಾರ ನಡೆದ ಭೀಕರ ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಬುಧವಾರ ಮತ್ತೆ ನಾಲ್ಕು ಮೃತದೇಹಗಳು ಸಿಕ್ಕಿವೆ.
ಇಲ್ಲಿನ ಕುಮಾರೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಮಂಗಳವಾರ ದಿನ ಇಬ್ಬರು ಮೃತಪಟ್ಟಿದ್ದರು. ಆದರೆ ಈಗ ಈ ದುರಂತದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಬುಧವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು 10 ಕ್ಕೂ ಹೆಚ್ಚು ಜೆಸಿಬಿ, ಕ್ರೇನ್ ಗ್ಯಾಸ್ ಕಟರ್ ಹಾಗೂ 200ಕ್ಕೂ ಹೆಚ್ಚು ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈವರೆಗೂ ರಕ್ಷಣಾ ಕಾರ್ಯದಲ್ಲಿ 54 ಜನರನ್ನು ರಕ್ಷಣೆ ಮಾಡಲಾಗಿದೆ. ಇದಲ್ಲದೆ ಘಾಜಿಯಾಬಾದ್ NDRFನ ತಂಡದ 78 ಸಿಬ್ಬಂದಿ ಧಾರವಾಡಕ್ಕೆ ಆಗಮಿಸಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಒಳಗೆ ಸಿಲುಕಿರುವವರಿಗೆ ಆಮ್ಲಜನಕ, ನೀರು ಆಹಾರ ಪೂರೈಸಲಾಗುತ್ತಿದೆ
ನಾಲ್ಕನೆ ಮಹಡಿಯ ಕಾಮಗಾರಿ ನಡೆಯುತ್ತಿರುವಾಗಲೇ ಏಕಾಏಕಿ ಕಟ್ಟಡ ಕುಸಿದು ನೆಲಸಮವಾಗಿದೆ. ನೆಲ ಅಂತಸ್ತು ಪೂರ್ಣಗೊಳ್ಳುತ್ತಲೆ ಬಿಲ್ಡರ್ ಗಳು ಅಂಗಡಿಕಾರರಿಗೆ ಮಳಿಗೆಗಳನ್ನು ಮಾರಾಟ ಮಾಡಿದ್ದರು. ಹೀಗಾಗಿ ಅನೇಕ ಅಂಗಡಿಕಾರರು ಒಳಗೆ ಸಿಲುಕಿದ್ದಾರೆ. ಮಧ್ಯಾಹ್ನದ ಸಮಯವಾಗಿದ್ದರಿಂದ ಕಂಪ್ಯೂಟರ್ ಸೆಂಟರ್ ಗೆ ಬಂದಿದ್ದ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸೇರಿ ಹೋಟೇಲ್ ಗೆ ಊಟಕ್ಕೆ ಬಂದ ಗ್ರಾಹಕರೂ ಅವಶೇಷಗಳಾಡಿಯಲ್ಲಿ ಸಿಲುಕಿದ್ದಾರೆ.
ಕುಮಾರೇಶ್ವರ ಬಡಾವಣೆಯಲ್ಲಿ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಮಂಗಳವಾರ ಮಧ್ಯಾಹ್ನ 3.40ರ ವೇಳೆಗೆ ಜನ ನೋಡುತ್ತಿದ್ದಂತೆ ಕುಸಿದು ಬಿದ್ದಿತ್ತು. ಈ ಕಟ್ಟಡ ಕಾಮಗಾರಿಯಲ್ಲಿ 100ಕ್ಕೂ ಹೆಚ್ಚು ಮಂದಿ ಇದ್ದರು ಎಂದು ಅಂದಾಜಿಸಲಾಗಿದೆ. ಈ ಪೈಕಿ 40ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, 27 ಮಂದಿಯನ್ನು ಜಿಲ್ಲಾಸ್ಪತ್ರೆ, 13 ಮಂದಿಗೆ ಕಿಮ್ಸ್, 6 ಮಂದಿಗೆ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.