ಬೆಂಗಳೂರು, ಮಾ 18 (DaijiworldNews/DB): ರಾಜ್ಯ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆಗಾಗಿ ಬಿರುಸಿನ ಪ್ರಕ್ರಿಯೆ ನಡೆಸುತ್ತಿವೆ. ಈ ನಡುವೆ ಕಾಂಗ್ರೆಸ್ನ ಮೊದಲ ಹಂತದ ಪಟ್ಟಿ ಸಿದ್ದವಾಗಿದ್ದು, 123 ರಿಂದ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದೆ.
ಯುಗಾದಿ ಬಳಿಕ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ 69 ಮಂದಿ ಹಾಲಿ ಶಾಸಕರ ಪೈಕಿ ಐದಾರು ಕ್ಷೇತ್ರ ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿಯೂ ಹಾಲಿ ಶಾಸಕರಿಗೆ ಟಿಕೆಟ್ ಖಾತ್ರಿಯಾಗಿದೆ ಎನ್ನಲಾಗಿದೆ. ಇನ್ನು ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ಗೆ ಮಹದೇವಪುರದಿಂದ ಟಿಕೆಟ್ ಖಚಿತಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಉಳಿದಂತೆ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಾಕಿಯಾಗಿದ್ದು, ಮೊದಲ ಪಟ್ಟಿ ಬಿಡುಗಡೆಗೊಂಡ ನಂತರ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳ್ಳಲಿದೆ.
ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ದೆಹಲಿಯಲ್ಲಿ ಮೂರು ತಾಸಿಗೂ ಹೆಚ್ಚು ಕಾಲ ಹಿರಿಯ ನಾಯಕರನ್ನೊಳಗೊಂಡ ಸಭೆ ನಡೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ. ವೇಣುಗೋಪಾಲ್, ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಹಿರಿಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜೆಡಿಎಸ್ ಮತ್ತು ಬಿಜೆಪಿಯಿಂದ ಕೆಲವು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಇರುವ ಹಿನ್ನೆಲೆಯಲ್ಲಿ ಅಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡದಿರಲು ಪಕ್ಷ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಬಹುತೇಕ ಹಾಲಿ ಶಾಸಕರಿಗೇ ಟಿಕೆಟ್ ನೀಡಲಾಗುತ್ತಿದೆ. ಐದಾರು ಕ್ಷೇತ್ರಗಳಲ್ಲಷ್ಟೇ ಹೊಸ ಮುಖಗಳನ್ನು ಚುನಾವಣಾ ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರತಿನಿಧಿಸುತ್ತಿರುವ ಶಿಗ್ಗಾಂ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಹೈಕಮಾಂಡ್ ಸೂಚಿಸಿತ್ತಾದರೂ, ಅವರು ಆ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಆಸಕ್ತಿ ತೋರದೇ ಧಾರವಾಡದಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೆ ಸದ್ಯ ಅವರಿಗೆ ಕೋರ್ಟ್ ಪ್ರಕರಣವೊಂದಿದ್ದು, ಚುನಾವಣೆ ವೇಳೆಗೆ ಪ್ರಕರಣ ಬಗೆಹರಿಯದಿದ್ದರೆ ಅವರ ಪತ್ನಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಯೋಚಿಸಿದ್ದಾರೆಂದು ಹೇಳಲಾಗುತ್ತಿದೆ.