ಬೆಂಗಳೂರು, ಮಾ 18 (DaijiworldNews/DB): ಕೊಲಂಬೊದಿಂದ ಆಗಮಿಸಿದ್ದ 30 ಮಂದಿ ಪ್ರಯಾಣಿಕರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದೇಶೀಯ ಆಗಮನದ ಗೇಟ್ನಲ್ಲಿ ತಪ್ಪಾಗಿ ಇಳಿಸಿದ ಘಟನೆ ಶುಕ್ರವಾರ ನಡೆದಿದೆ.
ಈ ಪ್ರಯಾಣಿಕರನ್ನು ವಿಮಾನ ನಿಲ್ದಾಣದ ಇಂಟರ್ನ್ಯಾಶನಲ್ ಆಗಮನದ ಬಸ್ ಗೇಟ್ ಬಳಿ ಇಳಿಸಬೇಕಿತ್ತು. ಆದರೆ ತಪ್ಪಾಗಿ ದೇಶೀಯ ಆಗಮನದ ಬಸ್ ಗೇಟ್ನಲ್ಲಿ ಇಳಿಸಲಾಗಿದೆ. ಶ್ರೀಲಂಕಾ ಏರ್ಲೈನ್ಸ್ ಯುಎಲ್ 173 ವಿಮಾನದಲ್ಲಿ ಇವರೆಲ್ಲರೂ ಬಂದಿದ್ದರು. ಇವರೆಲ್ಲರೂ ದೇಶೀಯ ಬ್ಯಾಗೇಜ್ ಕ್ಲೈಮ್ ಪ್ರದೇಶಕ್ಕೆ ಬಂದಿದ್ದಾರೆ ಎಂದು ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ ವಕ್ತಾರರು ತಿಳಿಸಿದ್ದಾರೆ.
ವಿಚಾರ ಅರಿತ ಟರ್ಮಿನಲ್ ಕಾರ್ಯಾಚರಣೆ ತಂಡವು ಕೂಡಲೇ ಸ್ಥಳಕ್ಕೆ ಧಾವಿಸಿ ಸಿಐಎಸ್ಎಫ್ ಮತ್ತು ಇಮಿಗ್ರೇಷನ್ ತಂಡಕ್ಕೆ ಎಚ್ಚರಿಕೆ ನೀಡಲಾಯಿತು. ಬಳಿಕ ಎಲ್ಲಾ ಪ್ರಯಾಣಿಕರನ್ನೂ ಅಂತಾರಾಷ್ಟ್ರೀಯ ಆಗಮನ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. ಗೊಂದಲದಿಂದಾಗಿ ಈ ಪರಿಸ್ಥಿತಿ ತಲೆದೋರದೆ ಎಂದು ಬಿಐಎಎಲ್ ಹೇಳಿದೆ.