ನವದೆಹಲಿ, ಮಾ 19 (DaijiworldNews/DB): ಐಟಿ ಉದ್ಯೋಗಿಯೊಬ್ಬರು ಹೆರಿಗೆ ರಜೆಯನ್ನೇ ಬಳಸಿಕೊಂಡು ಐಪಿಎಸ್ ಪರೀಕ್ಷೆಗೆ ತಯಾರಿ ನಡೆಸಿ ಯಶಸ್ಸು ಕಂಡಿದ್ದಾರೆ. ವಿಶೇಷವೆಂದರೆ ಒಂಬತ್ತು ತಿಂಗಳ ತುಂಬು ಗರ್ಭಿಣಿಯಾಗಿದ್ದಾಗಲೇ ಅವರು ಪರೀಕ್ಷೆ ಎದುರಿಸಿದ್ದರು.
ಶಹನಾಜ಼್ ಇಲಿಯಾಸ್ ಅವರೇ ಐಪಿಎಸ್ ಪರೀಕ್ಷೆ ಬರೆದ ಗಟ್ಟಿಗಿತ್ತಿ. ಐಟಿ ಕ್ಷೇತ್ರದಲ್ಲಿ ಐದು ವರ್ಷ ದುಡಿದ ಶಹನಾಜ್ ಉನ್ನತ ಸ್ಥಾನಮಾನದ ಆಕಾಂಕ್ಷೆ ಹೊಂದಿದ್ದರು. ಹೆರಿಗೆ ರಜೆ ಮೇಲೆ ಮನೆಯಲ್ಲಿದ್ದಾಗ ಅವರು ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಗೆ ಅಭ್ಯಾಸ ನಡೆಸಿದರು. ಕೇವಲ ಎರಡು ತಿಂಗಳ ಅಭ್ಯಾಸ ನಡೆಸಿ, ತುಂಬು ಗರ್ಭಿಣಿಯಾಗಿದ್ದ ಒಂಬತ್ತನೇ ತಿಂಗಳ ಅವಧಿಯಲ್ಲಿ ಪರೀಕ್ಷೆ ಬರೆದರು.
2020ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಶಹನಾಜ್ ಮನೆಯವರ ನೆರವಿನೊಂದಿಗೆ ಮಗುವಿನ ಆರೈಕೆ ಮಾಡುತ್ತಲೇ ಅಖಿಲ ಭಾರತ ಮಟ್ಟದಲ್ಲಿ 217ನೇ ರ್ಯಾಂಕ್ ಪಡೆದಿದ್ದಾರೆ. ಆ ಮೂಲಕ ಐಪಿಎಸ್ ಅಧಿಕಾರಿಯಾಗಿ ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ.