ನವದೆಹಲಿ, ಮಾ 19 (DaijiworldNews/DB): ಕಾಂಗ್ರೆಸ್ನ ಬೆಂಬಲ ಇಲ್ಲದೆ ವಿರೋಧ ಪಕ್ಷಗಳಿಗೆ ಬಿಜೆಪಿಯನ್ನು ಎದುರಿಸುವುದು ಅಸಾಧ್ಯ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳೆಲ್ಲಾ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿವೆ. ಆದರೆ ಕಾಂಗ್ರೆಸ್ ಬೆಂಬಲ ಇಲ್ಲದಿದ್ದರೆ ಬಿಜೆಪಿ ಸೋಲಿಸುವುದು ಸಾಧ್ಯವಿಲ್ಲ. ಮುಂದೆ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂರೆ ಕಾಂಗ್ರೆಸ್ ಅದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ತಯಾರಾಗುವುದು ಕಾಂಗ್ರೆಸ್ನ ಮೊದಲ ಆದ್ಯತೆ. ಆ ಬಳಿಕ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನಗಳಲ್ಲಿ ಚುನಾವಣೆ ನಡೆಯಲಿದೆ. ಇಲ್ಲೆಲ್ಲಾ ಕಾಂಗ್ರೆಸ್ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಪಕ್ಷ ಹೆಚ್ಚು ತೊಡಗಿಸಿಕೊಳ್ಳಲಿದೆ. ಸಾರ್ವತ್ರಿಕ ಚುನಾವಣೆ ಬಗ್ಗೆ ಈ ಎಲ್ಲಾ ಚುನಾವಣೆಗಳು ಮುಗಿದ ಬಳಿಕವಷ್ಟೇ ಯೋಚಿಸುತ್ತೇವೆ ಎಂದು ಪ್ರತಿಪಾದಿಸಿದರು.
ಟಿಎಂಸಿ ಹಾಗೂ ಸಮಾಜವಾದಿ ಪಕ್ಷದ ಯೋಜನೆಗಳಿಂದ ವಿಪಕ್ಷಗಳ ಒಗ್ಗಟ್ಟಿಗೆ ವ್ಯತಿರಿಕ್ತವಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಎರಡೂ ಪಕ್ಷಗಳ ನಾಯಕರು ಪರಸ್ಪರ ಭೇಟಿಯಾಗಿ ಸಭೆ ನಡೆಸುತ್ತಲೇ ಇರುತ್ತಾರೆ. ಆದರೆ ವಿರೋಧ ಪಕ್ಷವಾಗಿ ಕಾಂಗ್ರೆಸ್ ಬೆಂಬಲ ಸಾರ್ವತ್ರಿಕ ಚುನಾವಣೆಯಲ್ಲಿ ತೀರಾ ಅವಶ್ಯ ಎಂದರು.