ತಲಶ್ಶೇರಿ,ಮಾ 20 (DaijiworldNews/MS): ಕೇರಳದ ರೋಮನ್ ಕ್ಯಾಥೋಲಿಕ್ ಬಿಷಪ್ ಒಬ್ಬರು ಷರತ್ತಿನ ಮೇಲೆ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲಿಸುವುದಾಗಿ ಹೇಳಿರುವುದಕ್ಕೆ ಪ್ರತಿಪಕ್ಷಗಳು ಕಿಡಿಕಾರಿದೆ.
ತಲಶ್ಶೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕ್ಯಾಥೋಲಿಕ್ ರೈತರ ಸಮಾವೇಶದಲ್ಲಿ ಮಾತನಾಡಿದ ಆರ್ಚ್ ಬಿಷಪ್ ಜೋಸೆಫ್ ಪಂಪ್ಲಾನಿ, ಕೇಂದ್ರ ಸರ್ಕಾರವು ನೈಸರ್ಗಿಕ ರಬ್ಬರ್ ಬೆಲೆಯನ್ನು ಕೆ.ಜಿ.ಗೆ 300 ರೂ. ಮಾಡಿದರೆ, ಚರ್ಚ್ನಲ್ಲಿ ನಂಬಿಕೆ ಇಟ್ಟವರು ಈ ಬಾರಿ ಕೇರಳದಿಂದ ಬಿಜೆಪಿಯ ಮೊದಲ ಸಂಸದರನ್ನು ಆಯ್ಕೆ ಮಾಡಲು ನೆರವು ನೀಡಲಿದ್ದಾರೆ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಭಾರೀ ವಿರೋಧವೂ ವ್ಯಕ್ತವಾಗಿದೆ.
ಬಿಷಪ್ ಅವರ ಈ ಹೇಳಿಕೆಗೆ ಸಿಪಿಎಂ ಮತ್ತು ಕಾಂಗ್ರೆಸ್ ಕಿಡಿಕಾರಿದ್ದು ಉತ್ತರ ಭಾರತದ ರಾಜ್ಯಗಳಲ್ಲಿ ಚರ್ಚ್ ಮತ್ತು ಪಾದ್ರಿಗಳ ವಿರುದ್ಧ ನಡೆದ ದಾಳಿಯನ್ನು ಬಿಷಪ್ ಮರೆತಿರುವಂತೆ ಕಾಣುತ್ತದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ. ಬಿಷಪ್ ಅವರ ಹೇಳಿಕೆ, ಕೇರಳದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.