ಬೆಂಗಳೂರು, ಮಾ 21 (DaijiworldNews/MS): ರಾಜ್ಯ ರಾಜಕಾರಣದಲ್ಲಿ, ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಹೆಸರು ಮತ್ತೆ ಕೇಳಿಬರುತ್ತಿದೆ. ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸುತ್ತಿದ್ದು, ಹೀಗಾಗಿ ರಾಜಕೀಯಕ್ಕೆ ಮತ್ತೆ ರಮ್ಯಾ ರಿ ಎಂಟ್ರಿ ಕೊಡಲಿದ್ದಾರೆ ಎನ್ನುವ ವದಂತಿ ಹಬ್ಬಿದೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುವ ಚನ್ನಪಟ್ಟಣ ಅಥವಾ ಕಂದಾಯ ಸಚಿವ ಆರ್.ಅಶೋಕ್ ಪ್ರತಿನಿಧಿಸುವ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಎರಡು ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಮ್ಯಾ ಕರೆ ತರಲು ಪ್ರಯತ್ನ ಮಾಡಲಾಗಿದ್ದು ಪ್ರಮುಖ ಒಕ್ಕಲಿಗ ಸಮೂದಾಯದ ಮತಸೆಳೆಯಲು ಈ ಲೆಕ್ಕಾಚಾರ ಹಾಕಲಾಗಿದೆ.
ನಟಿ ರಮ್ಯಾ ೨೦೧೩ರಲ್ಲಿ ನಡೆದ ಲೋಕಸಭೆ ಉಪ ಉಪ ಚುನಾವಣೆಯಲ್ಲಿ ರಮ್ಯಾ ಕಾಂಗ್ರೆಸ್ನಿಂದ ಕಣಕ್ಕಿಳಿದು ಜೆಡಿಎಸ್ನ ಸಿ.ಎಸ್.ಪುಟ್ಟರಾಜು ವಿರುದ್ಧ ಗೆಲುವು ಸಾಧಿಸಿದ್ದರು. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ನ ಪುಟ್ಟರಾಜು ವಿರುದ್ಧ ಸೋಲು ಅನುಭವಿಸಿದ್ದರು. ಕಾಂಗ್ರೆಸ್ನ ರಾಷ್ಟ್ರೀಯ ಸಾಮಾಜಿಕ ಜಾಲತಾಣ ತಂಡದಲ್ಲೂ ಕೆಲಕಾಲ ಕಾರ್ಯನಿರ್ವಹಿಸಿದ್ದರು.
ಆ ನಂತರ ಇದ್ದಕ್ಕಿದ್ದಂತೆ ರಾಜಕಾರಣದಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ರಾಹುಲ್ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು. ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿದ್ದರಿಂದ ಮತ್ತೆ ರಮ್ಯಾ ಹೆಸರು ಚಾಲ್ತಿಗೆ ಬಂದಿತ್ತು. ಮಂಡ್ಯ ಲೋಕಸಭೆ ಕ್ಷೇತ್ರದಿಂದ 2024ರಲ್ಲಿ ಸ್ಪರ್ಧೆ ಮಾಡಬಹುದೆಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅದನ್ನು ಅವರು ತಳ್ಳಿ ಹಾಕಿದ್ದರು.
ಚುನಾವಣಾ ಸಮಿತಿ ಸಭೆಯಲ್ಲಿ ರಮ್ಯಾ ರಾಜ್ಯ ರಾಜಕಾರಣಕ್ಕೆ ವಾಪಸ್ ಬರಲು ಸಕಾಲ ಎಂದು ಕೆಲ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಮ್ಯಾ ಜೊತೆಯೂ ಒಂದು ಸುತ್ತಿನ ಮಾತುಕತೆ ನಡೆದಿದೆ.