ನವದೆಹಲಿ, ಮಾ 21 (DaijiworldNews/DB): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವುದು ವಾಸ್ತವವಾಗಿ ಕೆಲಸ ಮಾಡುವುದಿಲ್ಲ. ಅದೊಂದು ಅಸ್ಥಿರ ಪ್ರಯತ್ನ ಎಂದು ಚುನಾವಣಾ ತಂತ್ರಗಾರ ಮತ್ತು ಜನ್ ಸೂರಜ್ ಅಧ್ಯಕ್ಷ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಒಂದೊಂದು ಪ್ರತಿಪಕ್ಷದ ಸೈದ್ದಾಂತಿಕ ನೆಲೆಗಟ್ಟು ಬೇರೆ ಬೇರೆಯಾಗಿದೆ. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಅವರು ಒಟ್ಟಾದರೂ ಅದು ಅಸ್ಥಿರ. ಈ ಪ್ರಯತ್ನ ಕೆಲಸ ಮಾಡುವುದಿಲ್ಲ ಎಂದರು.
ಬಿಜೆಪಿಯನ್ನು ಸೋಲಿಸಲು ಕೇವಲ ಪ್ರತಿಪಕ್ಷಗಳು ಅಥವಾ ನಾಯಕರನ್ನು ಒಗ್ಗೂಡಿಸುವುದರಿಂದ ಸಾಧ್ಯವಿಲ್ಲ. ಬಿಜೆಪಿಯ ಶಕ್ತಿಯನ್ನು ಅರ್ಥೈಸಿಕೊಳ್ಳಬೇಕು. ಹಿಂದುತ್ವ, ರಾಷ್ಟ್ರೀಯತೆ, ಸಾಮಾಜಿಕ ಕಲ್ಯಾಣದಂತಹ ಮೂರು ಹಂತಗಳ ಪೈಕಿ ಎರಡನ್ನಾದರೂ ಮುರಿಯುವುದು ಅಸಾಧ್ಯವಾದರೆ ಬಿಜೆಪಿಗೆ ಸೋಲಿನ ಸವಾಲು ಹಾಕುವುದು ಅಸಾಧ್ಯ ಎಂದವರು ಹೇಳಿದರು.
ಗಾಂಧಿವಾದಿ, ಅಂಬೇಡ್ಕರ್ವಾದಿ, ಸಮಾಜವಾದಿ, ಕಮ್ಯೂನಿಸ್ಟ್ ವಾದಿ ಸಿದ್ದಾಂತಗಳ ಒಕ್ಕೂಟದಿಂದಷ್ಟೇ ಹಿಂದುತ್ವ ಸಿದ್ದಾಂತದ ವಿರುದ್ದ ಹೋರಾಡಬಹುದು. ವಿಪಕ್ಷಗಳ ನಡುವೆ ಸೈದ್ದಾಂತಿಕ ಹೊಂದಾಣಿಕೆಯಾಗದ ಹೊರತು ಬಿಜೆಪಿಯನ್ನು ಸೋಲಿಸುವುದು ಸಾಧ್ಯವಿಲ್ಲದ ಮಾತು ಎಂದು ಪ್ರಶಾಂತ್ ಕಿಶೋರ್ ತಿಳಿಸಿದರು.