ನವದೆಹಲಿ, ಮಾ 21 (DaijiworldNews/DB): ವಿರೋಧ ಪಕ್ಷದ ನಾಯಕರ ವಿರುದ್ದ ಇ.ಡಿ. ಸಿಬಿಐಗಳನ್ನು ಬಿಡಲಾಗುತ್ತದೆ. ಆದರೆ ಮೋದಿಜಿಯ ಮೆಹುಲ್ಬಾಯಿ ಇಂಟರ್ಪೋಲ್ನಿಂದ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಹೆಸರನ್ನು ಇಂಟರ್ಪೋಲ್ ತನ್ನ ರೆಡ್ ನೋಟಿಸ್ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ದ ಕಿಡಿ ಕಾರಿರುವ ಅವರು, ಮೋದಿಯವರು ತನ್ನ ಆತ್ಮೀಯ ಸ್ನೇಹಿತನಿಗಾಗಿ ಸಂಸತ್ತನ್ನೇ ನಿಷ್ಕ್ರಿಯಗೊಳಿಸಿದ್ದಾರೆ ಎಂದು ಆಪಾದಿಸಿದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ 11,356.84 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಆರೋಪಿಯಾಗಿದ್ದರು. ಅವರನ್ನು 2018ರಲ್ಲಿ ರೆಡ್ ಕಾರ್ನರ್ ನೋಟಿಸ್ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಇದೀಗ ಆ ಪಟ್ಟಿಯಿಂದ ಇಂಟರ್ಪೋಲ್ ಚೋಕ್ಸಿಯನ್ನು ಹೊರಗಿಟ್ಟಿದೆ. ಆದರೆ ಇಂಟರ್ಪೋಲ್ನ ಈ ಕ್ರಮವನ್ನು ಭಾರತ ಸರ್ಕಾರದ ಅಧಿಕಾರಿಗಳು ವಿರೋಧಿಸಿದ್ದರೂ, ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಇಂಟರ್ಪೋಲ್ ನಿರಾಕರಿಸಿತ್ತು ಎನ್ನಲಾಗಿದೆ. ಇದು ಚೋಕ್ಸಿ ಗಡಿಪಾರಿಗೆ ಕಾಯುತ್ತಿದ್ದ ಸಿಬಿಐ ಮತ್ತು ಇಡಿ ತನಿಖೆಗೂ ಹಿನ್ನಡೆ ಉಂಟು ಮಾಡಿದೆ ಎಂದು ತಿಳಿದು ಬಂದಿದೆ.